ಬೆಂಗಳೂರು :ಕಳೆದೊಂದು ವರ್ಷದಿಂದ ನಡೆಸುತ್ತಿದ್ದ ರೈತರ ಹೋರಾಟಕ್ಕೆ (farmers fight) ಕೊನೆಗೂ ಕೇಂದ್ರ ಸರ್ಕಾರ ಮಣಿದಿದೆ. ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ(three controversial farm laws repealed). ಇದರ ಬೆನ್ನಲ್ಲೆ, ದೇಶದ ಹಲವಾರು ರಾಜಕೀಯ ಮುಖಂಡರು, ಮುಖ್ಯಮಂತ್ರಿಗಳು, ಟ್ಟೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಕೃಷಿ ಕಾನೂನುಗಳ ರದ್ದು ಕುರಿತು, ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿ, ಕಾನೂನು ರದ್ದತಿಗೆ ಕಾರಣರಾದ ರೈತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಗುರು ನಾನಕ್ ಜಯಂತಿಯಂದು ಪಂಜಾಬಿಗಳ ಬೇಡಿಕೆಯನ್ನು ಒಪ್ಪಿಕೊಂಡು ಮೂರು ಕೃಷಿ ಕಾನೂನುಗಳನ್ನು ಹಿಂಪಡೆದಿದ್ದಕ್ಕಾಗಿ ಧನ್ಯವಾದಗಳು. ಇದಕ್ಕಾಗಿ ಕೇಂದ್ರ ಸರ್ಕಾರ ರೈತರ ಮತ್ತು ರೈತರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸಲಿ ಎಂದು ಹಾರೈಸುತ್ತೇನೆ ಎಂದು ಟ್ಟೀಟ್ ಮಾಡಿದ್ದಾರೆ.
ನವೋಜ್ ಸಿಂಗ್ ಸಿಧು ಅವರು ಟ್ಟೀಟ್ ಮಾಡುವ ಮೂಲಕ 3 ಕೃಷಿ ಕಾನೂನುಗಳನ್ನು ಹಿಂಪಡೆದಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಇದು ಒಂದು ಸರಿಯಾದ ನಿರ್ಧಾರ. ಕಿಸಾನ್ ಫ್ರಂಟ್‌ನ ಈ ಸತ್ಯಾಗ್ರಹವು ಐತಿಹಾಸಿಕ ವಿಜಯವಾಗಿದೆ. ಎಲ್ಲವನ್ನು ತ್ಯಾಗ ಮಾಡಿ ಹೋರಾಡಿದ್ದಕ್ಕೆ ಇಂದು ಫಲ ಸಿಕ್ಕಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನ ಚುನಾವಣಾ ಉಸ್ತುವಾರಿ ಹರೀಶ್ ಚೌಧರಿ ಅವರು, ಕೃಷಿ ಕಾಯ್ದೆ ಹಿಂಪಡೆಯುವ ಬಗ್ಗೆ ಟ್ವೀಟ್ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡರು. ರೈತ ಗೆದ್ದಿದ್ದಾನೆ, ದೇಶ ಗೆದ್ದಿದೆ. ಸರ್ಕಾರದ ಅಹಂಕಾರ ಇಳಿದಿದೆ ಎಂದು ಕಿಡಿಕಾರಿದರು.
ಕ್ಯಾಬಿನೆಟ್ ಸಚಿವ ವಿಜೇಂದ್ರ ಸಿಂಗ್ಲಾ ಅವರು, ಈ ಚಳವಳಿಗೆ ಕೊನೆಗೂ ಜಯ ಸಿಕ್ಕಿದೆ. ಇದು ಸ್ವಾಗತಾರ್ಹ ನಿರ್ಧಾರ. ಆದರೆ, ಈ ಸರ್ಕಾರ ಒಂದು ವರ್ಷ ರೈತರನ್ನು ರಸ್ತೆಯ ಮೇಲೆ ಕೂರಿಸಿತ್ತು ಎಂಬ ವಿಚಾರ ಮರೆಯುವುದಿಲ್ಲ. ಅನೇಕ ರೈತರು ಹುತಾತ್ಮರಾದರು, ಹುತಾತ್ಮರಾದ ರೈತರಿಗೆ ನಾನು ನಮಸ್ಕರಿಸುತ್ತೇನೆ. ರೈತ ಚಳವಳಿ ಇಂದು ಯಶಸ್ವಿಯಾಗಿದೆ ಎಂದು ಟ್ಟೀಟ್ ಮಾಡಿದ್ದಾರೆ.
ಸಚಿವ ಪರ್ಗತ್ ಸಿಂಗ್ ಅವರು, ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಮಾಡಿದ ರೈತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೋರಾಟದ ಮೂಲಕ ಇತಿಹಾಸದಲ್ಲಿ ರೈತರ ಹೆಸರು ಮುದ್ರಿಸಿದರು ಎಂದು ಟ್ಟೀಟ್ ಮಾಡಿದ್ದಾರೆ. ಪಂಜಾಬ್ ಮಾಜಿ ಸಿಎಂ ಪ್ರಕಾಶ್ ಸಿಂಗ್ ಬಾದಲ್ ದೇಶದ ರೈತರನ್ನು ಅಭಿನಂದಿಸಿದ್ದಾರೆ ಮತ್ತು ರೈತರ ತ್ಯಾಗಕ್ಕೆ ತಲೆಬಾಗಿದ್ದಾರೆ.