ಗಾಂಧಿನಗರ (ಗುಜರಾತ್) :ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಭಾರತದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿಗೆ ಬೆದರಿಕೆ ಇ-ಮೇಲ್ ಕಳಿಸಿದ ಪ್ರಕರಣದಲ್ಲಿ ತೆಲಂಗಾಣದ ವ್ಯಕ್ತಿಯನ್ನು ಬಂಧಿಸಿದ ಬಳಿಕ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಗುಜರಾತ್ನ ಗಾಂಧಿನಗರದ ಕಾನ್ಸ್ಟೇಬಲ್ವೊಬ್ಬರ ಪುತ್ರನನ್ನು ಮುಂಬೈ ಅಪರಾಧ ವಿಭಾಗದ ಪೊಲೀಸರು ಸೋಮವಾರ ಇಂದು ಬಂಧಿಸಿದ್ದಾರೆ.
ಬೆದರಿಕೆ ಇ-ಮೇಲ್ ಮೂಲ ಗುಜರಾತ್ನ ಗಾಂಧಿನಗರ ಎಂದು ತನಿಖೆಯಲ್ಲಿ ಅರಿತ ಪೊಲೀಸರು, ಕಲೋಲ್ ನಿವಾಸಿಯಾದ ಪೊಲೀಸ್ ಸಿಬ್ಬಂದಿಯ ಪುತ್ರ ಜಗತ್ ಸಿಂಗ್ ಖಾತ್ ಎಂಬಾತನನ್ನು ಬಂಧಿಸಿದ್ದಾರೆ. ಇದೀಗ ಪೊಲೀಸರು ಯುವಕನನ್ನು ವಿಚಾರಣೆಗಾಗಿ ಮುಂಬೈಗೆ ಕರೆದೊಯ್ದಿದ್ದಾರೆ. ಈ ಯುವಕನ ಇಮೇಲ್ ಐಡಿ ಹ್ಯಾಕ್ ಆಗಿರುವ ಸಾಧ್ಯತೆಯೂ ಇದೆ. ಹ್ಯಾಕ್ ಮಾಡಿದ ಐಡಿಯಿಂದ ಮುಕೇಶ್ ಅಂಬಾನಿಗೆ ಬೆದರಿಕೆ ಇಮೇಲ್ಗಳು ಬಂದ ಶಂಕೆ ವ್ಯಕ್ತವಾಗಿದ್ದು, ಮುಂಬೈ ಸೈಬರ್ ಸೆಲ್ ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುತ್ತಿದೆ.
ಪೊಲೀಸ್ ಮನೆಗೆ ಬೀಗ:ಗಾಂಧಿನಗರದ ಕಲೋಲ್ ಪೊಲೀಸ್ ಲೈನ್‌ನ ನಿವಾಸಿಯಾಗಿರುವ ಆರೋಪಿ ಮನೆಗೆ ಪೊಲೀಸರು ತನಿಖೆ ವೇಳೆ ತೆರಳಿದಾಗ ಬೀಗ ಹಾಕಲಾಗಿತ್ತು. ಕುಟುಂಬ ಸಮೇತ ಕಾಣೆಯಾಗಿದ್ದು, ಚರ್ಚೆಗೆ ಗ್ರಾಸವಾಗಿತ್ತು. ನೆರೆಹೊರೆಯಲ್ಲಿ ವಾಸಿಸುವ ಪೊಲೀಸ್ ಸಿಬ್ಬಂದಿಯ ಕುಟುಂಬಗಳು ಸಹ ಇವರ ಬಗ್ಗೆ ಮಾಹಿತಿ ನೀಡಿರಲಿಲ್ಲ. ಇದಾದ ಬಳಿಕ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಲಾಗಿದೆ.