ಗಾಂಧಿನಗರ(ಗುಜರಾತ್):ನರೇಂದ್ರ ಮೋದಿ ಭಾರತ ಕಂಡ ಅತ್ಯಂತ ಯಶಸ್ವಿ ಪ್ರಧಾನಮಂತ್ರಿ ಮತ್ತು ಈ ಪೀಳಿಗೆಯ ಶ್ರೇಷ್ಠ ಜಾಗತಿಕ ನಾಯಕ ಎಂದು ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ, ಬಿಲಿಯನೇರ್ ಮುಖೇಶ್ ಅಂಬಾನಿ ಬಣ್ಣಿಸಿದರು. ಬುಧವಾರ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯಲ್ಲಿ ಮಾತನಾಡಿದ ಅವರು, "ಜಾಗತಿಕ ನಾಯಕರಾದ ಮೋದಿ ಮಾತನಾಡಿದರೆ ಇಡೀ ಜಗತ್ತೇ ಕೇಳುತ್ತದೆ, ಜೊತೆಗೆ ಚಪ್ಪಾಳೆ ತಟ್ಟುತ್ತದೆ. ದೇಶದಲ್ಲಿ ಸದ್ಯಕ್ಕೆ ಧ್ವನಿಸುತ್ತಿರುವ ಒಂದು ವಾಕ್ಯವೆಂದರೆ, ಅದು ಮೋದಿ ಹೈ ತೋ ಮಮ್ಕಿನ್ ಹೈ. ಇದು ವಿದೇಶದವರೆಗೂ ವಿಸ್ತರಿಸಿದೆ" ಎಂದು ಹೇಳಿದರು.
"ವಿದೇಶದಲ್ಲಿರುವ ನನ್ನ ಸ್ನೇಹಿತರು 'ಮೋದಿ ಹೈ ತೋ ಮಮ್ಕಿನ್ ಹೈ' ಎಂದರೇನು ಅಂಥ ಕೇಳುತ್ತಾರೆ. ಅದಕ್ಕೆ ನಾನು, ಭಾರತದ ಪ್ರಧಾನಿ ಮೋದಿ ಅವರು ತಮ್ಮ ದೂರದೃಷ್ಟಿ, ಸಂಕಲ್ಪ ಮತ್ತು ಕಾರ್ಯಗತದಿಂದಾಗಿ ಅಸಾಧ್ಯಗಳೆಲ್ಲವನ್ನೂ ಸಾಧಿಸಿ ತೋರಿಸಿದ್ದಾರೆ ಎಂದಾಗ, ಇದನ್ನು ಒಪ್ಪಿದ ಅವರೇ ಮೋದಿ 'ಇದ್ದಾಗ ಎಲ್ಲವೂ ಸಾಧ್ಯ' ಎಂದು ಉದ್ಗರಿಸಿದರು" ಎಂದರು.
ಮುಂದಿನ ಪೀಳಿಗೆ ಮೋದಿಗೆ ಕೃತಜ್ಞ:"ವಿದೇಶಿಯರು ನವ ಭಾರತದ ಜೊತೆಗೆ, ಹೊಸ ಗುಜರಾತ್ ಬಗ್ಗೆಯೂ ಯೋಚಿಸುವಂತಾಗಿದೆ. ಈ ಪರಿವರ್ತನೆ ಸಾಧ್ಯವಾಗಿದ್ದು, ನರೇಂದ್ರ ಮೋದಿ ಎಂಬ ನಾಯಕನ ಕಾರಣದಿಂದ. ನಾನೂ ಹೆಮ್ಮೆಯ ಗುಜರಾತಿ. ರಿಲಯನ್ಸ್ ಕಂಪನಿಯೂ ಗುಜರಾತಿನದ್ದೇ. ಈ ಹೆಮ್ಮೆ ಮುಂದೆಯೂ ಇರುತ್ತದೆ" ಎಂದು ಅಂಬಾನಿ ಹೇಳಿದರು.