ಮಹಾರಾಷ್ಟ್ರ: ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಯ ಸಂಬಳ, ಸಂಪತ್ತು ಮತ್ತು ಐಷಾರಾಮಿ ಜೀವನದ ಬಗ್ಗೆ ಸುದ್ದಿಯಾಗುವುದು ಸಾಮಾನ್ಯ. ಆದರೆ, ಅವರ ಕಾರು ಚಾಲಕರ ಸಂಬಳ ಎಷ್ಟಿದೆ ಅಂತ ಸುದ್ದಿ ಕೇಳಿದ್ದೀರಾ? ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ ತಮ್ಮ ಕಾರು ಚಾಲಕನಿಗೆ ಎಷ್ಟು ಸಂಬಳ ನೀಡುತ್ತಾರೆ ಗೊತ್ತಾ? ಕೇಳಿದರೆ ಸಾಮಾನ್ಯರಿಗೆ ಅಚ್ಚರಿ ಅನ್ನಿಸಬಹುದು.
ಕಾರು ಚಾಲಕರಿಗೆ ಸಂಬಳದ ಜೊತೆ ವಿಶೇಷ ಭತ್ಯೆ:ಸುಮಾರು 7 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಅಂಬಾನಿಯು ವಿಶ್ವದ ಅತ್ಯಂತ ದುಬಾರಿ ವಸತಿ ಕಟ್ಟಡ ಆಂಟಿಲಿಯಾ ಕೂಡ ಅವರ ಸಿರಿವಂತಿಕೆಗೆ ಸಾಕ್ಷಿ. ಸದ್ಯ ಅವರು ತಮ್ಮ ಕುಟುಂಬದೊಂದಿಗೆ ಇದೇ ಕೋಟೆಯಲ್ಲಿ ವಾಸ ಮಾಡುತ್ತಾರೆ. ಕಟ್ಟಡವು ಬರೋಬ್ಬರಿ 27 ಸಂತಸ್ತು ಹೊಂದಿದ್ದು, ಇದರಲ್ಲಿ ಎಲ್ಲ ಐಷಾರಾಮಿ ಸೌಕರ್ಯವೂ ಉಂಟು. ಈ ಐಷಾರಾಮಿ ಜೀವನ ನಡೆಸುವ ಅವರು ತಮ್ಮ ಕಾರು ಚಾಲಕನಿಗೆ ಕೊಡುತ್ತಿರುವ ಮಾಸಿಕ ಸಂಬಳ ಎಷ್ಟಿರಬಹುದು ಅನ್ನೋದನ್ನು ಒಮ್ಮೆ ಊಹಿಸಿಕೊಳ್ಳಿ!
ಮಾಹಿತಿ ಪ್ರಕಾರ ಅಂಬಾನಿ ಕಾರು ಚಾಲಕನ ಮಾಸಿಕ ಸಂಬಳ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುವ ಸಾಫ್ಟ್ವೇರ್ ಉದ್ಯೋಗಿಗಳಿಗಿಂತ ಹೆಚ್ಚು. ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿದ್ದು ಆ ಕಾರು ಚಾಲಕರಿಗೆ ಸಂಬಳದ ಜೊತೆ ವಿಶೇಷ ಭತ್ಯೆಗಳನ್ನು ಸಹ ನೀಡಲಾಗುತ್ತದೆಯಂತೆ.
ಕಾರು ಚಾಲಕನ ವಿಡಿಯೋ ವೈರಲ್: ಅಂಬಾನಿ ಅವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ತಿಂಗಳಿಗೆ ಸುಮಾರು 2 ಲಕ್ಷ ರೂಪಾಯಿ ಸಂಬಳ ಎಂದು ಈ ವಿಡಿಯೋದಲ್ಲಿ ಅವರೇ ಬಹಿರಂಗಪಡಿಸಿದ್ದಾರೆ. ವರ್ಷಕ್ಕೆ ತಾಳೆ ಮಾಡಿ ನೋಡಿದರೆ 24 ಲಕ್ಷ ರೂ.ಗಳು. ಆದರೆ, ಇದು ಐದು ವರ್ಷಗಳ ಹಿಂದಿನ ವಿಡಿಯೋ ಎನ್ನಲಾಗುತ್ತಿದೆ. ಅವರು ಹೇಳಿದ್ದು ನಿಜವೇ ಆಗಿದ್ದರೆ ಸದ್ಯದ ಕಾರು ಚಾಲಕರ ಸಂಬಳ ಎಷ್ಟು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಹಾಗಾದರೆ, ಈ ಪ್ರಮಾಣದ ಮಾಸಿಕ ಸಂಬಳ ಪಡೆಯುವುದು ಅಷ್ಟು ಸುಲಭವೇ?