ಗುಜರಾತ್/ಗಾಂಧಿನಗರ:ರಾಜ್ಯದ 14 ಜಿಲ್ಲೆಗಳಲ್ಲಿ ಮ್ಯೂಕೋರ್ಮೈಕೋಸಿಸ್(ಬ್ಲ್ಯಾಕ್ ಫಂಗಸ್) ಕಂಡು ಬಂದಿದ್ದು, ಅನೇಕರ ಸಾವಿಗೆ ಕಾರಣವಾಗಿದೆ. ಅಹಮದಾಬಾದ್‌ನಲ್ಲಿ 35 ಜನ ಸಾವನ್ನಪ್ಪಿದ್ದರೆ, 21 ಜನ ಸೂರತ್‌ನಲ್ಲಿ ಮೃತಪಟ್ಟಿರುವುದು ವರದಿಯಾಗಿದೆ. ಈ ಎಲ್ಲ 76 ಮಂದಿ ಮ್ಯೂಕೋರ್ಮೈಕೋಸಿಸ್ ಕಾಯಿಲೆಯಿಂದ ಉಸಿರು ಚೆಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಅಹಮದಾಬಾದ್‌ನಲ್ಲಿ ಮಕ್ಕಳಿಗೂ ಈ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಮಕ್ಕಳ ಚಿಕಿತ್ಸೆಗಾಗಿ ಸಿವಿಲ್ ಆಸ್ಪತ್ರೆಯ ಮಕ್ಕಳ ವಾರ್ಡ್‌ನಲ್ಲಿ ಪ್ರತ್ಯೇಕ ಹಾಸಿಗೆಗಳನ್ನು ನಿಗದಿಪಡಿಸಲಾಗಿದೆ.
ಅಹಮದಾಬಾದ್‌ನಲ್ಲಿ 13 ವರ್ಷದ ಬಾಲಕನಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡ ನಂತರ, ಸಿವಿಲ್ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದಲ್ಲಿ ರೋಗದಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಯಿತು.
ಮಕ್ಕಳಿಗೆ ಚಿಕಿತ್ಸೆ ನೀಡಲು ಮಕ್ಕಳ ತಜ್ಞರು, ಇಎನ್‌ಟಿ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ಜೈಪ್ರಕಾಶ್ ಶಿವರೆ 'ಈಟಿವಿ ಭಾರತ್'ಗೆ ತಿಳಿಸಿದ್ದಾರೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಕರೆದಿದ್ದ ಪ್ರಮುಖ ಸಮಿತಿ ಸಭೆಯಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ವಿಶೇಷ ವ್ಯವಸ್ಥೆ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಸರ್ಕಾರಿ ಆಸ್ಪತ್ರೆಗಳಲ್ಲದೆ, ರಾಜ್ಯದ ಖಾಸಗಿ ಆಸ್ಪತ್ರೆಗಳು ಸಹ ಮ್ಯೂಕಾರ್ಮೈಕೋಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿವೆ. ಅದಕ್ಕಾಗಿ ಸರ್ಕಾರ ಈಗಾಗಲೇ 27,000 ಕ್ಕೂ ಹೆಚ್ಚು ಚುಚ್ಚುಮದ್ದನ್ನು ನೀಡಿದೆ.
ಮ್ಯೂಕೋರ್ಮೈಕೋಸಿಸ್ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲು ಇಎನ್‌ಟಿ ತಜ್ಞರು, ದಂತವೈದ್ಯರು, ನರಶಸ್ತ್ರ ಚಿಕಿತ್ಸಕರು ಮತ್ತು ಅರಿವಳಿಕೆ ತಜ್ಞರನ್ನು ಒಳಗೊಂಡ ವೈದ್ಯರ ತಂಡ ಲಭ್ಯವಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಸರ್ಕಾರಿ ಆಸ್ಪತ್ರೆಗಳಲ್ಲಿ 1800 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ.