ಚೆನ್ನೈ (ತಮಿಳುನಾಡು): ಹಸಿರು ಕ್ರಾಂತಿಯ ಪಿತಾಮಹ ಹಾಗೂ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಚೆನ್ನೈನ ಬೀಸಂಟ್ ನಗರದ ಚಿತಾಗಾರದಲ್ಲಿ ನೆರವೇರಿತು. ಇದಕ್ಕೂ ಮೊದಲು ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಿದರು. ಈ ವೇಳೆ, ಎಂ.ಎಸ್.ಸ್ವಾಮಿನಾಥನ್ ಅವರ ಪುತ್ರಿಯರಾದ ಸೌಮ್ಯಾ, ಮಥುರಾ, ನಿತ್ಯ ರಾವ್ ಮತ್ತು ಇತರ ಕುಟುಂಬ ಸದಸ್ಯರು, ಕೇರಳದ ಸಚಿವರಾದ ಕೃಷ್ಣನ್ ಕುಟ್ಟಿ, ಪಿ.ಪ್ರಸಾದ್, ತೆಲಂಗಾಣ ಸಚಿವ ನಿರಂಜನ್ ರೆಡ್ಡಿ, ಮಾರ್ಕ್ಸ್ ವಾದಿ ಪಕ್ಷದ ರಾಜ್ಯ (ಟಿಎನ್) ಕಾರ್ಯದರ್ಶಿ ಕೆ.ಬಾಲಕೃಷ್ಣನ್ ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ಕೇರಳದ ಕೃಷಿ ಸಚಿವ ಪಿ.ಪ್ರಸಾದ್ ಮತ್ತು ಇಂಧನ ಸಚಿವ ಕೃಷ್ಣನ್ ಕುಟ್ಟಿ ಅವರು ಸ್ವಾಮಿನಾಥನ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ನಂತರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಿ.ರಾಜಾ ಅವರು ಗೌರವ ನಮನ ಸಲ್ಲಿಸಿದರು. ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಎಂ ಎಸ್ ಸ್ವಾಮಿನಾಥನ್ ಅವರು ಶ್ರೇಷ್ಠ ಕೃಷಿ ವಿಜ್ಞಾನಿಯಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಭಾರತೀಯ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ನಾನು ವೈಯಕ್ತಿಕವಾಗಿ ಅವರೊಂದಿಗೆ ಪರಿಚಿತನಾಗಿದ್ದೆ ಎಂದು ನೆನೆದರು.
ಭಾರತದ ಅಗ್ರಗಣ್ಯ ಕೃಷಿ ವಿಜ್ಞಾನಿಗಳಲ್ಲಿ ಒಬ್ಬರಾದ ಮತ್ತು ಹಸಿರು ಕ್ರಾಂತಿಯ ಹರಿಕಾರರಾದ ಎಂ.ಎಸ್.ಸ್ವಾಮಿನಾಥನ್ ಅವರು ವಯೋಸಹಜ ಕಾರಣದಿಂದ ಚೆನ್ನೈನ ತೆನಾಂಪೇಟೆಯಲ್ಲಿರುವ ತಮ್ಮ ಮನೆಯಲ್ಲಿ (ಸೆಪ್ಟೆಂಬರ್ 28)ರಂದು ನಿಧನರಾಗಿದ್ದರು. ಇದಾದ ನಂತರ ಅವರ ಪಾರ್ಥಿವ ಶರೀರವನ್ನು ಚೆನ್ನೈನ ತಾರಾಮಣಿಯಲ್ಲಿರುವ ಎಂ ಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಆವರಣದಲ್ಲಿ ಸಾರ್ವಜನಿಕರು ಮತ್ತು ರಾಜಕೀಯ ಮುಖಂಡರ ದರ್ಶನಕ್ಕಿಡಲಾಗಿತ್ತು.