ನವದೆಹಲಿ :ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ಸಂಸತ್ತಿನ ಮಳೆಗಾಲದ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ನಿಯಮ ದುರುಪಯೋಗ ಮತ್ತು ಅಶಿಸ್ತಿನಿಂದ ವರ್ತಿಸಿದ್ದ ವಿವಿಧ ಪಕ್ಷಗಳ 12 ಸದಸ್ಯರು ಅಮಾನತುಗೊಂಡಿದ್ದಾರೆ. ಇದೇ ವಿಚಾರವಾಗಿ ಪ್ರತಿಪಕ್ಷಗಳು ಗರಂ ಆಗಿದ್ದು, ಸ್ಪೀಕರ್ ನಿರ್ಧಾರವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿವೆ.
'ಸಂಸದರ ಅಮಾನತು ನಿರ್ಧಾರ ಪ್ರಜಾಪ್ರಭುತ್ವದ ಕಗ್ಗೊಲೆ' ಎಂದಿರುವ ವಿಪಕ್ಷಗಳು, ಅಮಾನತು ಅನಧಿಕೃತವಾಗಿದೆ. ಇದನ್ನು ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಖಂಡಿಸುತ್ತವೆ.
ಸರ್ಕಾರದ ಸರ್ವಾಧಿಕಾರಿ ಧೋರಣೆ ಹಾಗೂ ಸಂಸದೀಯ ಪ್ರಜಾಪ್ರಭುತ್ವ ರಕ್ಷಣೆ ಸೇರಿದಂತೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ನಾಳೆ ಸಭೆ ನಡೆಸಲಿದ್ದೇವೆ ಎಂದು ಪ್ರಕಟಣೆ ಹೊರಡಿಸಿವೆ.
ಅಮಾನತುಗೊಂಡ ಸಂಸದರ ಆಕ್ರೋಶ :ಈ ಕುರಿತು ಮಾತನಾಡಿರುವ ಕಾಂಗ್ರೆಸ್ನ ರಿಪುನ್ ಬೋರಾ, 'ಹೌದು, ಕಳೆದ ಅಧಿವೇಶನದ ವೇಳೆ ನಾವು ಪ್ರತಿಭಟನೆ ಮಾಡಿದ್ದೇವೆ. ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವುದು ನಮ್ಮ ಕರ್ತವ್ಯ. ಸದನದಲ್ಲಿ ಧ್ವನಿ ಎತ್ತುವ ಬದಲು ಎಲ್ಲಿ ಮಾತನಾಡಬೇಕು?. ಇದು ಪ್ರಜಾಪ್ರಭುತ್ವದ ಕಗ್ಗೊಲೆ' ಎಂದರು.
ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, 'ಸಿಸಿಟಿವಿ ದೃಶ್ಯ ಪರಿಶೀಲಿಸಿದ್ರೆ ಗೊತ್ತಾಗುತ್ತದೆ. ಪುರುಷ ಮಾರ್ಷಲ್ಸ್ ಮಹಿಳಾ ಸಂಸದೆಯರನ್ನು ತಳ್ಳಿದ್ದಾರೆ. ಸಂಸದರ ಅಮಾನತು ಏಕಪಕ್ಷೀಯ ನಿರ್ಧಾರ. ಇದು ಅಸಾಂವಿಧಾನಿಕ ಕ್ರಮ' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಅಶಿಸ್ತು: ರಾಜ್ಯಸಭೆಯ 12 ವಿಪಕ್ಷ ಸಂಸದರು ಅಮಾನತು
ಕಳೆದ ಅಧಿವೇಶನದಲ್ಲಿ ಅಶಿಸ್ತಿನ ವರ್ತನೆ ತೋರಿರುವ ಗಂಭೀರ ಆರೋಪದ ಮೇಲೆ ರಾಜ್ಯಸಭೆಯ ಎಳಮರಲ್ ಕರೀಂ, ಫುಲೋದೇವಿ ನೇತಮ್, ಛಾಯಾ ವರ್ಮಾ, ರಿಪುನ್ ಬೋರಾ, ಬಿಯೋಯ್ ವಿಶ್ವಂ, ರಾಜಮಣಿ ವಿಶ್ವಂ, ಪ್ರಿಯಾಂಕಾ ಚತುರ್ವೇದಿ, ಅಖಿಲೇಶ್ ಪ್ರಸಾದ್ ಸೇರಿ 12 ಸಂಸದರು ಅಮಾನತುಗೊಂಡಿದ್ದಾರೆ.