ಜಬಲ್ಪುರ(ಮಧ್ಯಪ್ರದೇಶ):ಜೈಲಿನಲ್ಲಿರುವ ತಮ್ಮ ಪತಿಗೆ ಜಾಮೀನು ನೀಡುವಂತೆ ಖಾಂಡ್ವಾ ಮೂಲದ 40 ವರ್ಷದ ಮಹಿಳೆಯೊಬ್ಬರು ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇಂದೋರ್ ಜೈಲಿನಲ್ಲಿರುವ ತನ್ನ ಪತಿಯೊಂದಿಗೆ ದೈಹಿಕ ಸಂಬಂಧ ಹೊಂದುವ ಮೂಲಕ ಮಗು ಪಡೆದುಕೊಳ್ಳಲು ಅನುಮತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ. ನನ್ನ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದರಿಂದಾಗಿ ಅವರು ಜೈಲಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ನಾನು ತಾಯಿಯಾಗಲು ಬಯಸಿದ್ದೇನೆ. ಆದರೆ, ಪತಿ ಜೈಲಿನಲ್ಲಿರುವ ಕಾರಣಕ್ಕೆ ಈ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಮಹಿಳೆ ದೂರಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ವಿವೇಕ್ ಅಗರ್ವಾಲ್ ನ್ಯಾಯಪೀಠದ ಮುಂದೆ ಹಾಜರಾದ ವಕೀಲ ವಸಂತ ಡೇನಿಯಲ್ ಎಂಬವರು ಮಹಿಳೆಯ ಪರವಾಗಿ ವಾದ ಮಂಡಿಸಿದರು. ''ಭಾರತ ಸಂವಿಧಾನದ 21ನೇ ಕಲಂ ಪ್ರತಿಯೊಬ್ಬ ಮನುಷ್ಯನಿಗೂ ಮಗು ಹೊಂದುವ ಹಕ್ಕು ನೀಡುತ್ತದೆ'' ಎಂದರು.
''ನನಗೆ 40 ವರ್ಷ. ನನ್ನ ಪತಿ ಕಳೆದ 7 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 351 ಮತ್ತು 302ರ ಅಡಿಯಲ್ಲಿ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ಪರಿಸ್ಥಿತಿಯಲ್ಲಿ, ಆತ(ಗಂಡ) ಜೈಲಿನಿಂದ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ, ಮಗು ಪಡೆದುಕೊಳ್ಳುವ ಸಂತೋಷ ಅನುಭವಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇದಕ್ಕೆ ಕಾನೂನು ಮೂಲ ಕಾರಣ. ಆದರೆ, 21ನೇ ವಿಧಿಯು ನನಗೆ ಮಗು ಪಡೆದುಕೊಳ್ಳುವ ಹಕ್ಕು ನೀಡುತ್ತದೆ. ಇದರಿಂದ ಜೈಲಿನಲ್ಲಿರುವ ಪತಿಗೆ ಜಾಮೀನು ನೀಡಿ, ಮಗು ಹೊಂದುವ ಸಂತೋಷ ಪಡೆಯಲು ನನಗೆ ಅವಕಾಶ ನೀಡಬೇಕು'' ಎಂದು ಮಹಿಳೆಯ ಪರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಸರ್ಕಾರದ ಪರ ವಾದಿಸಿದ ವಕೀಲರು ಹೇಳುವುದೇನು?:''ಈ ಪ್ರಕರಣದಲ್ಲಿ ದೂರುದಾರರಿಗೆ ಯಾವುದೇ ರಿಯಾಯಿತಿ ಇಲ್ಲ. ಏಕೆಂದರೆ ದೂರುದಾರರಿಗೆ ವಯಸ್ಸಾಗಿದೆ. ಅವರು ತಾಯಿಯಾಗುವ ಸಾಧ್ಯತೆ ಕಡಿಮೆ'' ಎಂದು ವಕೀಲ ಸಂತೋಷ್ ಕಠಾರ್ ಸರ್ಕಾರದ ಪರ ವಾದ ಮಂಡಿಸಿದರು.