ಶಿಯೋಪುರ್(ಮಧ್ಯಪ್ರದೇಶ): ಕಳೆದ ಕೆಲ ದಿನಗಳಿಂದ ಮಧ್ಯಪ್ರದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಜನ-ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದರ ಮಧ್ಯೆ ಕೆಲವರು ತೊಂದರೆಗೊಳಗಾಗಿದ್ದು, ಪ್ರಾಣ ರಕ್ಷಣೆಗೆ ಹರಸಾಹಸ ಪಡುತ್ತಿದ್ದಾರೆ.
ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ವಿಜಯಪುರದಲ್ಲಿ ಮಹಾಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹೀಗಾಗಿ, ಬಿಲ್ಡಿಂಗ್ವೊಂದರಲ್ಲಿ 60 ಜನರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಇವರೆಲ್ಲರೂ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಉದ್ದೇಶದಿಂದ ತೆರಳಿದ್ದರು. ರಾತ್ರಿ ವೇಳೆ ದೊಡ್ಡ ಪ್ರಮಾಣದ ಮಳೆ ಸುರಿದ ಕಾರಣ ಎಲ್ಲರೂ ಬಿಲ್ಡಿಂಗ್ನೊಳಗೆ ಸಿಲುಕಿದ್ದಾರೆ. ಪ್ರವಾಹದಿಂದಾಗಿ ಈಗಾಗಲೇ ನೆಲಮಹಡಿ ಸಂಪೂರ್ಣ ಜಲಾವೃತಗೊಂಡಿದ್ದು, ಎಲ್ಲರನ್ನು ಮೊದಲನೇ ಮಹಡಿಗೆ ಶಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿ ನೀರಜ್ ಶರ್ಮಾ ತಿಳಿಸಿದ್ದಾರೆ.