ಜಬಲ್‌ಪುರ (ಮಧ್ಯಪ್ರದೇಶ): ಅನುಮಾನಾಸ್ಪದವಾಗಿ ಮೃತಪಟ್ಟ ಗರ್ಭಿಣಿಯ ಮರಣೋತ್ತರ ಪರೀಕ್ಷೆಯನ್ನು ಸ್ಮಶಾನದಲ್ಲಿ ಡ್ರಮ್ಮರ್‌ಗಳ ಮೂಲಕ ಮಾಡಿಸಿರುವ ಗಂಭೀರ ಆರೋಪ ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯಲ್ಲಿ ಕೇಳಿ ಬಂದಿದೆ.
ಪನಾಗರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 17ರಂದು ರಾಧಾ ಲೋಧಿ ಎಂಬ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಗಂಡನ ಮನೆಯವರ ಕಿರುಕುಳ ಹಾಗೂ ನಿರ್ಲಕ್ಷ್ಯದಿಂದ ರಾಧಾ ಮೃತಪಟ್ಟಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪ ಮಾಡಿದ್ದರು.
ಇದೀಗ ರಾಧಾ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಡ್ರಮ್ಮರ್‌ಗಳು ನಡೆಸಿದ್ದಾರೆ ಎನ್ನಲಾದ ವಿಡಿಯೋವೊಂದು ಬಹಿರಂಗವಾಗಿದೆ. ರಾಧಾ ಸಾವಿನ ಸತ್ಯಾಂಶವನ್ನು ಮುಚ್ಚಿಡಲು ಗಂಡನ ಮನೆಯವರೇ ಈ ರೀತಿ ಮಾಡಿಸಿದ್ದಾರೆ. ಅಲ್ಲದೇ, ಮರಣೋತ್ತರ ಪರೀಕ್ಷೆ ನಡೆಸುವ ಬಗ್ಗೆ ಪೊಲೀಸರು ಹಾಗೂ ವೈದ್ಯರಿಗೂ ತಿಳಿಸಿಲ್ಲ ಎಂದು ರಾಧಾ ಕುಟುಂಬಸ್ಥರು ಆರೋಪಿಸಿದ್ದಾರೆ.