ಭೋಪಾಲ್ (ಮಧ್ಯಪ್ರದೇಶ):ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಕಾವು ದಿನದಿನಕ್ಕೆ ಜೋರಾಗುತ್ತಿದೆ. ಚುನಾವಣಾ ಅಖಾಡಕ್ಕಿಳಿಯುವ ಉದ್ದೇಶದಿಂದಲೇ ಛತ್ತರ್ಪುರ ಜಿಲ್ಲಾಧಿಕಾರಿ ನಿಶಾ ಬಂಗ್ರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ನ್ಯಾಯಾಲಯದ ಮಧ್ಯಪ್ರವೇಶದ ನಂತರ ಸರ್ಕಾರ ಇವರ ರಾಜೀನಾಮೆಯನ್ನು ಅಂಗೀಕರಿಸಿತು. ಇದರಿಂದ ನಿಶಾ ಅವರ ಮುಂದಿನ ಹಾದಿ ಸುಗಮವಾಗಿದೆ. ಇವರು ಬೇತುಲ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯ ಆಡಳಿತ ಸೇವೆ ತೊರೆದು ರಾಜಕೀಯಕ್ಕೆ ಜಿಗಿಯಲು ಸಿದ್ಧತೆ ನಡೆಸಿದ್ದ ನಿಶಾ ಬಂಗ್ರೆ, ಬೇತುಲ್ ಜಿಲ್ಲೆಯ ಆಮ್ಲಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಬಹಳ ದಿನಗಳಿಂದ ತಯಾರಿ ನಡೆಸುತ್ತಿದ್ದರು. ಚುನಾವಣಾ ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲೆಂದೇ ಅವರು ರಾಜ್ಯ ಸರ್ಕಾರಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದ್ದರು. ಆದರೆ, ತಮ್ಮ ರಾಜೀನಾಮೆ ಅಂಗೀಕಾರವಾಗಲು ತೀವ್ರ ಹೋರಾಟ ನಡೆಸಬೇಕಾಯಿತು. ಆಮ್ಲಾದಿಂದ ಭೋಪಾಲ್‌ಗೆ ಯಾತ್ರೆ ಕೈಗೊಂಡಿದ್ದ ಅವರು, ಮುಖ್ಯಮಂತ್ರಿ ಭವನದ ಮುಂದೆ ಆಮರಣಾಂತ ಉಪವಾಸ ಕೂರುವುದಾಗಿಯೂ ಎಚ್ಚರಿಕೆ ನೀಡಿದ್ದರು. ನಂತರ ಅವರನ್ನು ಭೋಪಾಲ್ ಪೊಲೀಸರು ವಶಕ್ಕೆ ಪಡೆದಿದ್ದರು. ಇದರಿಂದಾಗಿ ನಿಶಾ ಒಂದು ದಿನದ ಮಟ್ಟಿಗೆ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು.
ಹೈಕೋರ್ಟ್ ಮೊರೆ ಹೋಗಿದ್ದ ಅಧಿಕಾರಿ:ಅಷ್ಟೇ ಅಲ್ಲ, ತಮ್ಮ ರಾಜೀನಾಮೆಯನ್ನು ಅಂಗೀಕರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ನಿಶಾ ಜಬಲ್ಪುರ ಹೈಕೋರ್ಟ್ ಪೀಠದ ಮೊರೆ ಹೋಗಿದ್ದರು. ಅಕ್ಟೋಬರ್ 23ರೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಅ.27 ರೊಳಗೆ ರಾಜೀನಾಮೆಗೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಇದರ ಬೆನ್ನಲ್ಲೇ ನಿಶಾ ಬಂಗ್ರೆ ರಾಜೀನಾಮೆ ಅಂಗೀಕಾರದ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.