ಭೋಪಾಲ್: ಮಧ್ಯಪ್ರದೇಶ ಸಚಿವೆ ಉಷಾ ಠಾಕೂರ್ ಸದಾ ಒಂದಿಲ್ಲ ಒಂದು ಸುದ್ದಿಯಿಂದ ಸದ್ದು ಮಾಡುತ್ತಿರುತ್ತಾರೆ. ಸದ್ಯ ಇದೇ ಸಚಿವೆ ಹೊಸ ಹೇಳಿಕೆಯೊಂದನ್ನು ನೀಡಿದ್ದು, ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ತಮ್ಮೊಂದಿಗೆ ಯಾರಾದರೂ ಸೆಲ್ಫಿ ತೆಗೆದುಕೊಳ್ಳಲು ಬಯಸುವವರು 100 ರೂ. ಪಾವತಿಸಬೇಕೆಂದು ಹೇಳಿದ್ದಾರೆ.
ನನ್ನೊಂದಿಗೆ ಯಾರಾದರೂ ಸೆಲ್ಫಿ ತೆಗೆದುಕೊಳ್ಳಲು ಬಯಸುವವರು 100 ರೂ. ಪಾವತಿಸಬೇಕು. ಏಕೆಂದರೆ, ಇಲ್ಲಿ ನನ್ನ ಸಮಯ ವ್ಯರ್ಥವಾಗುತ್ತದೆ. ಹಾಗೆಯೇ, ನನ್ನ ಕಾರ್ಯಕ್ರಮಗಳ ವಿಳಂಬಕ್ಕೆ ಕಾರಣವಾಗುತ್ತದೆ. ಹಾಗಾಗಿ, 100 ರೂ. ಪಾವತಿಸಬೇಕು. ಇದೇ ಹಣವನ್ನು ನಾನು ಬಿಜೆಪಿಯ ಪಕ್ಷದ ಕೆಲಸಕ್ಕಾಗಿ ಠೇವಣಿ ಇಡುವೆ ಎಂದಿದ್ದಾರೆ.
ಖಾಂಡ್ವಾದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ತಾವು ಹೂಗುಚ್ಛಗಳ ಬದಲಾಗಿ ಪುಸ್ತಕಗಳನ್ನು ಸ್ವೀಕರಿಸುವುದಾಗಿ ಪ್ರತಿಪಾದಿಸಿದರು. ಏಕೆಂದರೆ, ಹೂವುಗಳಲ್ಲಿ ಲಕ್ಷ್ಮಿ ದೇವಿಯು ವಾಸಿಸುತ್ತಿರುವುದರಿಂದ "ಕಳಂಕವಿಲ್ಲದ" ಭಗವಾನ್ ವಿಷ್ಣುವಿಗೆ ಮಾತ್ರ ಹೂವುಗಳನ್ನು ಅರ್ಪಿಸಬಹುದು ಎಂದರು.