ದಾತಿಯಾ, ಮಧ್ಯಪ್ರದೇಶ:ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ದುರ್ಸಾದಾ ಪೊಲೀಸ್ ಠಾಣೆ ವ್ಯಾಪ್ತಿಯ ಬುಹಾರಾ ನದಿಯಲ್ಲಿ ವೇಗವಾಗಿ ಬಂದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿರುವುದರ ಬಗ್ಗೆ ವರದಿಯಾಗಿದೆ. ಆದರೆ, ಸಾವಿನ ಬಗ್ಗೆ ಅಧಿಕಾರಿಗಳು ದೃಢಪಡಿಸಿಲ್ಲ.
ಅಪಘಾತದಲ್ಲಿ 36ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಇದುವರೆಗೆ ಐವರ ಮೃತದೇಹಗಳು ಪತ್ತೆಯಾಗಿವೆ. ಮಾಹಿತಿ ಪಡೆದು ಜಿಲ್ಲಾಧಿಕಾರಿ ಹಾಗೂ ಅಧೀಕ್ಷಕ ಪ್ರದೀಪ್ ಶರ್ಮಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಇದರೊಂದಿಗೆ ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಕೂಡ ಈ ದೊಡ್ಡ ಘಟನೆಯ ಬಗ್ಗೆ ಗಮನ ಹರಿಸಿದ್ದಾರೆ ಮತ್ತು ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಮದುವೆ ಸಮಾರಂಭಕ್ಕೆ ಹೋಗುತ್ತಿದ್ದ ವೇಳೆ ಅಪಘಾತ:ಮಾಹಿತಿ ಪ್ರಕಾರ, ಗ್ವಾಲಿಯರ್‌ನ ಬಿಲ್ಹೇಟಿ ಗ್ರಾಮದಿಂದ ಜಾತಾರಾಗೆ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಮಿನಿ ಟ್ರಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಬುಹಾರಾ ಗ್ರಾಮದ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆಯಿಂದ ಟ್ರಕ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗ್ತಿದೆ. ಅಪಘಾತದ ಮಾಹಿತಿಯ ಮೇರೆಗೆ ಪೊಲೀಸರು-ಆಡಳಿತ ಮಂಡಳಿ ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಪ್ರಾರಂಭಿಸಿದರು. ಈ ವೇಳೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧುಮಗಳ ಜೊತೆ ಪ್ರಯಾಣಿಸುತ್ತಿದ್ದ ಸಂಬಂಧಿಗಳು :ಅಪಘಾತದಲ್ಲಿ ಬಲಿಯಾದವರೆಲ್ಲರೂ ಮಧುಮಗಳ ಕುಟುಂಬಸ್ಥರ ಸಂಬಂಧಿಗಳು ಎಂದು ಹೇಳಲಾಗುತ್ತಿದೆ. ಸಂಬಂಧಿಕರೆಲ್ಲರೂ ಮಧುಮಗಳನ್ನು ಕರೆದುಕೊಂಡು ಆಕೆಯ ಮದುವೆಗೆ ಹೋಗುತ್ತಿದ್ದರು. ಆದರೆ ಅವರ ಮದುವೆಯ ಮುನ್ನ ದಿನವೇ ಶೋಕವಾಗಿ ಬದಲಾಗಿದೆ. ಅಪಘಾತಕ್ಕೆ ಕಾರಣವಾದ ಮಿನಿ ಟ್ರಕ್‌ನ ವೇಗ ಹೆಚ್ಚಿತ್ತು ಎಂದು ಹೇಳಲಾಗುತ್ತಿದೆ. ಈ ಘಟನೆ ಬಗ್ಗೆ ಜನರು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.