ಜಬಲ್‌ಪುರ (ಮಧ್ಯಪ್ರದೇಶ): ಮಹಿಳೆಯೊಬ್ಬಳು ತಾಯ್ತನಕ್ಕಾಗಿ ತನ್ನ ಪತಿಗೆ ತಾತ್ಕಾಲಿಕ ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು, ಆಕೆ ಮಗು ಹೆರಲು ಶಕ್ತಳೇ ಎಂಬ ಮಾಹಿತಿ ನೀಡುವಂತೆ ನೇಮಕಗೊಂಡಿದ್ದ ಐವರು ವೈದ್ಯರ ತಂಡವು ಗುರುವಾರ ಹೈಕೋರ್ಟ್‌ನಲ್ಲಿ ತನ್ನ ವರದಿ ಸಲ್ಲಿಸಿದೆ. ವರದಿಯಲ್ಲಿ ಅರ್ಜಿದಾರ ಮಹಿಳೆಯ ಗರ್ಭಾವಸ್ಥೆಯಾಗುವ ವಯಸ್ಸು ಮೀರಿದೆ, ಮಕ್ಕಳನ್ನು ಹೊಂದುವಂತಿಲ್ಲ ಎಂದು ಉಲ್ಲೇಖಿಸಿದೆ.
ಕ್ರಿಮಿನಲ್ ಮೊಕದ್ದಮೆ ಹಿನ್ನೆಲೆ ಆಕೆಯ ಪತಿ ಇಂದೋರ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಮಗುವನ್ನು ಹೊಂದುವ ಹಿನ್ನೆಲೆ ತನ್ನ ಪತಿಗೆ ತಾತ್ಕಾಲಿಕ ಜಾಮೀನು ನೀಡುವಂತೆ ಕೋರಿ ಮಹಿಳೆಯು ಹೈಕೋರ್ಟ್ ಮೊರೆ ಹೋಗಿದ್ದಳು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ, ಮಹಿಳೆಯು ಈ ವಯಸ್ಸಿನಲ್ಲಿ ಗರ್ಭಿಣಿಯಾಗಬಹುದೇ ಎಂದು ಪರೀಕ್ಷಿಸಿ ವರದಿ ನೀಡುವಂತೆ ಸೂಚನೆ ನೀಡಿತ್ತು. ವೈದ್ಯರ ತಂಡ ತಮ್ಮ ವರದಿಯನ್ನು ಸಲ್ಲಿಸಿದ್ದು, ಅರ್ಜಿದಾರರು ಸಂತಾನ ಪ್ರಾಪ್ತಿಯಾಗುವ ವಯಸ್ಸನ್ನು ಮೀರಿದ್ದಾರೆ. ಅಲ್ಲದೇ ಋತುಬಂಧದಿಂದಾಗಿ ನೈಸರ್ಗಿಕವಾಗಿ ಅಥವಾ ಕೃತಕ ಗರ್ಭಧಾರಣೆಯ ಮೂಲಕ ಗರ್ಭಿಣಿಯಾಗಲು ಕೂಡ ಅಸಾಧ್ಯ. ಭಾರತದಲ್ಲಿ, 40 ರಿಂದ 50 ವರ್ಷ ವಯಸ್ಸಿನ ಮಹಿಳೆಯರಲ್ಲಿ ಮುಟ್ಟು ನಿಲ್ಲುತ್ತದೆ. ಹಾಗಾಗಿ ಆಕೆಯ ಪತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡರು.