ಭೋಪಾಲ್(ಮಧ್ಯಪ್ರದೇಶ) :ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ನೂತನ ನಿಯಮವೊಂದನ್ನು ಜಾರಿಗೆ ತಂದಿದೆ. ಸೆಪ್ಟೆಂಬರ್ 1ರಿಂದ ಮದ್ಯ ಖರೀದಿಸುವವರಿಗೆ ಮದ್ಯದಂಗಡಿಗಳು ಬಿಲ್ ನೀಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.
ಮದ್ಯ ಮಾರಾಟ/ಮದ್ಯ ಖರೀದಿಗೆ ಸಂಬಂಧಿಸಿದ ದೂರುಗಳ ಪರಿಹಾರಕ್ಕಾಗಿ, ದೇಶ-ವಿದೇಶಿ ಮದ್ಯದ ಅಂಗಡಿಗಳು ಖರೀದಿದಾರರಿಗೆ ಪಾವತಿಸಿದ ಮೊತ್ತಕ್ಕೆ ಬಿಲ್ಲುಗಳನ್ನು ನೀಡುವುದು ಕಡ್ಡಾಯವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಮದ್ಯ ಖರೀದಿಸಿದ ಜನರು ರಶೀದಿ ಪಡೆಯುತ್ತಿರಲಿಲ್ಲ. ಆದರೆ, ಇನ್ಮುಂದೆ ರಶೀದಿ ಕೊಡುವುದು ಮದ್ಯದಂಗಡಿಗಳ ಜವಾಬ್ದಾರಿಯಾಗಿದೆ ಎಂದು ರಾಜ್ಯ ಅಬಕಾರಿ ಆಯುಕ್ತ ರಾಜೀವ್ ದುಬೆ ಹೇಳಿದ್ದಾರೆ.
ಮದ್ಯದ ಅಂಗಡಿ ಮಾಲೀಕರು ತಮ್ಮ ಮಳಿಗೆಗಳಲ್ಲಿ ಬೋರ್ಡುಗಳನ್ನು ಹಾಕಲಿದ್ದಾರೆ. ಆ ಪ್ರದೇಶದ ಅಬಕಾರಿ ಉಸ್ತುವಾರಿಯ ದೂರವಾಣಿ ಸಂಖ್ಯೆ, ವಿವಿಧ ಮದ್ಯಗಳ ಬೆಲೆಗಳು ಮತ್ತು ಇತರ ಸಮಸ್ಯೆಗಳ ಬಗ್ಗೆ ಕುಂದುಕೊರತೆಗಳಿದ್ದಲ್ಲಿ ಅವರನ್ನು ಸಂಪರ್ಕಿಸಬಹುದು ಎಂದು ದುಬೆ ಹೇಳಿದರು.
ಇದನ್ನೂ ಓದಿ: ಯುಪಿ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಸ್ಥಿತಿ ಗಂಭೀರ.. ಆಸ್ಪತ್ರೆಗೆ ಸಿಎಂ ಯೋಗಿ ದೌಡು..
ನಿಗದಿತ ಬೆಲೆಗಳಿಗಿಂತ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡಿದರೆ ಅಂತಹ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಮಧ್ಯಪ್ರದೇಶದಲ್ಲಿ ಕನಿಷ್ಠ 1,300 ಐಎಂಎಫ್‌ಎಲ್ ಮತ್ತು 2,000 ದೇಶೀಯ ಮದ್ಯದ ಅಂಗಡಿಗಳಿವೆ. ರಾಜ್ಯ ಸರ್ಕಾರವು ವಾರ್ಷಿಕವಾಗಿ ಮದ್ಯ ಮಾರಾಟದಿಂದ 9,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಆದಾಯವನ್ನು ಗಳಿಸಿದೆ.