ಕಾಶೀಪುರ (ಉತ್ತರಾಖಂಡ್ ) : ದೆಹಲಿಯ ಜಹಾಂಗೀರ್‌ಪುರಿ, ಮಧ್ಯಪ್ರದೇಶದ ಖಾರ್ಗೋನೆ ಮತ್ತು ಉತ್ತರಾಖಂಡದ ದಾದಾ ಜಲಾಲ್‌ಪುರ ಗ್ರಾಮದಲ್ಲಿ ಹನುಮ ಜಯಂತಿ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ವಿರುದ್ಧ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಕಿಡಿಕಾರಿದ್ದಾರೆ. ಕಲ್ಲು ತೂರಾಟ ಮಾಡುವವರನ್ನು ತುಕ್ಡೆ ತುಕ್ಡೆ ಗ್ಯಾಂಗ್‌ನ ಸ್ಲೀಪರ್ ಸೆಲ್ ಎಂದು ಕರೆದಿದ್ದಾರೆ. ಯಾರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೋ ಅಂತಹವರ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಅವರ ಸೋದರಳಿಯ ಘನೇಂದ್ರ ಸಿಂಗ್ ಗೆಹ್ಲೋಟ್ ಅವರ ಆರತಕ್ಷತೆಗೆ ಬಂದಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಲ್ಲು ತೂರಾಟಗಾರರು ತುಕ್ಡೆ-ತುಕ್ಡೆ ಗ್ಯಾಂಗ್‌ನ ಸ್ಲೀಪರ್ ಸೆಲ್‌ಗಳಾಗಿದ್ದು, ದೇಶದಲ್ಲಿ ಅಶಾಂತಿ ಸೃಷ್ಟಿಸುವುದು ಇವರ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿಯೇ ದೇಶದಲ್ಲಿ ಗೊಂದಲದ, ಭಯದ ವಾತಾವರಣವನ್ನು ಸೃಷ್ಟಿಸಲು ಅವಕಾಶ ಸಿಕ್ಕಾಗಲೆಲ್ಲಾ ಈ ರೀತಿ ಮಾಡುತ್ತಿರುವುದಾಗಿ ಹೇಳಿದ್ದಾರೆ. ಯಾರು ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೋ ಅಂತವರ ವಿರುದ್ಧ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.