ಇಂದೋರ್ (ಮಧ್ಯಪ್ರದೇಶ):ಬಲವಂತದ ಮತಾಂತರದ ವಿರುದ್ಧ ಕ್ರಮಕ್ಕೆ ಸುಪ್ರೀಂಕೋರ್ಟ್ ಸೂಚಿಸಿದ ಬೆನ್ನಲ್ಲೇ, ಮುಸ್ಲಿಂ ವಕೀಲರೊಬ್ಬರು ತನ್ನನ್ನು ಮತಾಂತರಗೊಂಡು ವಿವಾಹವಾಗಲು ಬಲವಂತ ಮಾಡುತ್ತಿದ್ದಾರೆ ಎಂದು ಹಿಂದು ಮಹಿಳೆಯೊಬ್ಬರು ದೂರಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕಲಂನಡಿ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಇನ್ನೊಂದೆಡೆ, ಈ ಆರೋಪಗಳನ್ನು ಆಪಾದಿತ ವಕೀಲ ತಳ್ಳಿಹಾಕಿದ್ದಾರೆ.
ಮಧ್ಯಪ್ರದೇಶದ ಗಾಂಧಿನಗರ ನಿವಾಸಿಯಾದ ವಿವಾಹಿತ ಹಿಂದು ಮಹಿಳೆ, ಮುಸ್ಲಿಂ ವಕೀಲ ಅಫ್ತಾಬ್ ಪಠಾಣ್ ಎಂಬುವರ ವಿರುದ್ಧ ಕೇಸ್ ನೀಡಿದ್ದಾರೆ. ವಕೀಲರು ತನ್ನನ್ನು ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಸಿ ಹಾಕಿದ್ದಾರೆ. ಮದುವೆಯಾಗುವಂತೆಯೂ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕಳೆದ 2 ವರ್ಷಗಳಿಂದ ಅಫ್ತಾಬ್ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜಾರಿ ಮಾಡದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಆತಮ್ಹತ್ಯೆ ಮಾಡಿಕೊಳ್ಳುವೆ ಎಂದು ಮಹಿಳೆ ಎಚ್ಚರಿಕೆ ನೀಡಿದ್ದಾರೆ.