ಭೋಪಾಲ್ (ಮಧ್ಯ ಪ್ರದೇಶ) : ಈ ವರ್ಷಾಂತ್ಯದಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಮಧ್ಯೆ ರಾಜಕೀಯ ಪಕ್ಷಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದ್ದು, ಇದೀಗ ಪೋಸ್ಟರ್ ವಾರ್ನಿಂದಾಗಿ ರಾಜ್ಯದ ರಾಜಕೀಯ ಮತ್ತಷ್ಟು ರಂಗೇರುತ್ತಿದೆ. ಮಾಜಿ ಸಿಎಂ ಕಮಲ್ ನಾಥ್ ಮತ್ತು ಹಾಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರಗಳಿರುವ ಆಕ್ಷೇಪಾರ್ಹ ಪೋಸ್ಟರ್‌ಗಳು ಅಲ್ಲಲ್ಲಿ ಕಾಣಿಸಿಕೊಂಡ ಮೂರು ದಿನಗಳ ನಂತರ, ಈಗ ಮತ್ತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರ ಹಾಗೂ ಕ್ಯೂಆರ್ ಕೋಡ್ ಇರುವ ಪೋಸ್ಟರ್‌ಗಳು ಕೆಲವೆಡೆ ಕಂಡು ಬಂದಿವೆ. ಸಿಎಂ ಚಿತ್ರದೊಂದಿಗೆ ಕ್ಯೂಆರ್ ಕೋಡ್ ಇರುವ ಹಾಗೂ ಕೆಲಸ ಮಾಡಿಸಿಕೊಳ್ಳಬೇಕಾದರೆ 50 ಪರ್ಸೆಂಟ್ ಕಮಿಷನ್ ತನ್ನಿ ಎಂದು ಬರೆದಿರುವ ಪೋಸ್ಟರ್‌ಗಳು ಭೋಪಾಲ್ ಮತ್ತು ಸಿಂಗ್ರೌಲಿಯಲ್ಲಿ ಕಾಣಿಸಿವೆ.
ಭೋಪಾಲ್‌ನ ಪ್ಲಾಟಿನಂ ಪ್ಲಾಜಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪೋಸ್ಟರ್‌ಗಳನ್ನು ಹಾಕಲಾಗಿದೆ. ಇವುಗಳಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಚಿತ್ರವನ್ನು ಫೋನ್ಪೆ ಸ್ಕ್ಯಾನರ್‌ನ ಮಧ್ಯದಲ್ಲಿ ಅಂಟಿಸಲಾಗಿದೆ. 50 ಪರ್ಸೆಂಟ್ ತನ್ನಿ, ಕೆಲಸ ಮಾಡಿಸಿಕೊಳ್ಳಿ ಎಂದು ಅದರ ಮೇಲೆ ಬರೆಯಲಾಗಿದೆ. ಈ ಪೋಸ್ಟರ್ ಅನ್ನು ಯಾರು ಹಾಕಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ.
ಈ ಹಿಂದೆ ಜೂನ್ 23ರಂದು ಮಾಜಿ ಸಿಎಂ ಕಮಲ್ ನಾಥ್ ಅವರ ಇದೇ ರೀತಿಯ ಪೋಸ್ಟರ್‌ಗಳನ್ನು ಹಾಕಲಾಗಿತ್ತು. ಇದರಲ್ಲಿ ಅವರನ್ನು ವಾಂಟೆಡ್ ಮತ್ತು ಭ್ರಷ್ಟನಾಥ ಎಂದು ಬರೆಯಲಾಗಿತ್ತು. ಇದರಲ್ಲೂ ಕ್ಯೂ ಆರ್ ಕೋಡ್ ಹಾಕಿ ಅದರ ಮೇಲೆ ಕಮಲ್ನಾಥ್ ಚಿತ್ರ ಹಾಕಲಾಗಿತ್ತು. ಕಾಂಗ್ರೆಸ್ ಸರ್ಕಾರದ 15 ತಿಂಗಳಿಂದ ಈಡೇರದ ಭರವಸೆಗಳ ಬಗ್ಗೆ ಈ ಕ್ಯೂಆರ್ ಕೋಡ್ ತೋರಿಸುವಂತೆ ಮಾಡಲಾಗಿತ್ತು.