ಜೈಪುರ: ಪ್ರೇಮಸೌಧವೆಂದೇ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಆಗ್ರಾದ ತಾಜ್‌ಮಹಲ್‌ನಲ್ಲಿ ವಿವಾದ ಭುಗಿಲೆದ್ದಿದೆ. ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರೊಬ್ಬರು ತಾಜ್‌ಮಹಲ್‌ನಲ್ಲಿ ಹಲವು ವರ್ಷಗಳಿಂದ ಮುಚ್ಚಿರುವ ಕೊಠಡಿಗಳ ಬಾಗಿಲು ತೆರೆಯುವಂತೆ ಆಗ್ರಹಿಸಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಜೈಪುರದ ಮಾಜಿ ರಾಜಮನೆತನ ರಾಜಕುಮಾರಿ ಮತ್ತು ಪ್ರಸ್ತುತ ಸವಾಯಿ ಮಾಧೋಪುರದ ಬಿಜೆಪಿ ಸಂಸದೆ ದಿಯಾ ಕುಮಾರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಜೈಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ದಿಯಾ ಕುಮಾರಿ, ಈ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು, ಅಂದು ಒತ್ತುವರಿ ಮಾಡಿಕೊಂಡಿದ್ದರು. ಈ ಭೂಮಿಯಲ್ಲಿ ಮೊದಲು ಅರಮನೆ ಇತ್ತು, ಷಹಜಹಾನ್ ಈ ಭೂಮಿಯನ್ನು ಇಷ್ಟಪಟ್ಟಾಗ, ಅದನ್ನು ಮಹಾರಾಜರಿಂದ ಪಡೆದುಕೊಂಡರು. ಜೈಪುರ ರಾಜಮನೆತನದ ಪುಸ್ತಕಗಳಲ್ಲಿ ಭೂಮಿಗೆ ಸಂಬಂಧಿಸಿದ ದಾಖಲೆಗಳಿವೆ. ಕೋರ್ಟ್ ಹೇಳಿದರೆ ಅವುಗಳನ್ನು ಹಾಜರುಪಡಿಸುತ್ತೇವೆ ಎನ್ನುವ ಮೂಲಕ ತಾಜ್ ಮಹಲ್ ಭೂಮಿಯ ಮೇಲೆ ತಮ್ಮ ಹಕ್ಕನ್ನು ವ್ಯಕ್ತಪಡಿಸಿದರು.