ಋಷಿಕೇಶ್(ಉತ್ತರಾಖಂಡ):ಭಾರತೀಯ ಹಿಂದೂ ಸಂಪ್ರದಾಯ, ವಿವಿಧ ಆಚರಣೆಗಳು ವಿದೇಶಿಯರಿಗೆ ತುಂಬಾ ಇಷ್ಟ. ಭಾರತೀಯ ಸಂಸ್ಕೃತಿಗೆ ಮನಸೋತಿರುವ ವಿದೇಶಿಗರು ಇತ್ತೀಚೆಗೆ ಭಾರತೀಯ ಹೆಣ್ಣುಮಕ್ಕಳನ್ನು ವಿವಾಹ ಮಾಡಿಕೊಳ್ಳಲು ಇಷ್ಟ ಪಡುತ್ತಿದ್ದಾರೆ. ಕೆನಡಾದ ಹೌಸ್ ಆಫ್ ಕಾಮನ್ ಸದಸ್ಯ ಕರೋಲ್ ಹ್ಯೂಸ್ ಅವರ ಮಗ ಶಾನ್ ಅವರು, ಉತ್ತರಾಖಂಡ ಋಷಿಕೇಶ್ ಪುಣ್ಯಭೂಮಿಯ ಹೆಣ್ಣು ಮಗಳು ಶೀತಲ್ ಅವರನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ.
ಋಷಿಕೇಶ್ದ ಪುಣ್ಯನೆಲದಲ್ಲಿ ವರ ಶಾನ್ ವಧು ಶೀತಲ್ ಜೊತೆ ಸಪ್ತಪದಿ ತುಳಿಯುವದರೊಂದಿಗೆ ಅಗ್ನಿಸಾಕ್ಷಿಯಾಗಿ ಸೋಮವಾರ ಶುಭದಿನದಂದು ಮದುವೆಯಾದರು. ನಂತರ ಒಬ್ಬರಿಗೊಬ್ಬರು ಹೂವು ಮಾಲೆ ಬದಲಿಸುವ ಮೂಲಕ ಇಬ್ಬರು ಏಳು ಜನ್ಮಗಳವರೆಗೆ ಒಟ್ಟಿಗೆ ಇರುವುದಾಗಿ ಪ್ರತಿಜ್ಞೆ ಮಾಡಿದರು. ಋಷಿಕೇಶ್ದ ನಿವಾಸಿ ದಿವಂಗತ ಶ್ರೀರಾಮ್ ಅವರ ಪುತ್ರಿ ಶೀತಲ್ ಪುಂಡಿರ್ ಅವರು ಭಾರತೀಯ ವೈದಿಕ ಸಂಪ್ರದಾಯದಂತೆ ಕೆನಡಾದ ನಿವಾಸಿ ಶಾನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವರನ ತಾಯಿ ಕರೋಲ್ ಹ್ಯೂಸ್ ಅವರು ಕೆನಡಾದ ಫೆಡರಲ್ ಚುನಾವಣೆಗಳಲ್ಲಿ ಹೌಸ್ ಆಫ್ ಕಾಮನ್ಸ್‌ಗೆ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ನ್ಯೂ ಡೆಮಾಕ್ರಟಿಕ್ ಪಕ್ಷದ ಸದಸ್ಯರಾದ ಕರೋಲ್ ಹ್ಯೂಸ್ ಅವರು, ಕೆನಡಾದ ಸಹಾಯಕ ಉಪಾಧ್ಯಕ್ಷರು ಮತ್ತು ಎಲ್ಲ ಸಮಿತಿಗಳ ಅಧ್ಯಕ್ಷರಾಗಿದ್ದಾರೆ.
ಶೀತಲ್ ಅವರ ಮಾವ ಕೀತ್ ಹ್ಯೂಸ್ ಅವರು ಕೆನಡಾದ ನಿಕಲ್ ಮೈನಿಂಗ್‌ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರ ಶಾನ್ ಅವರು ನ್ಯೂ ಡೆಮಾಕ್ರಟಿಕ್ ಪಕ್ಷದ ನೀತಿ ಸಲಹೆಗಾರರಾಗಿದ್ದಾರೆ. ಪ್ರಸ್ತುತ ಹ್ಯೂಸ್ ಕುಟುಂಬವು ಕೆನಡಾದ ಹ್ಯಾಮರ್ ಒಂಟಾರಿಯೋದಲ್ಲಿ ವಾಸಿಸುತ್ತಿದೆ. ಋಷಿಕೇಶ್ ನಿವಾಸಿ ಶೀತಲ್ ಪುಂಡೀರ್ ಅವರ ತಂದೆ ಶ್ರೀರಾಮ್ ಪುಂಡೀರ್ ಹಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ನಂತರ ಚಿಕ್ಕಪ್ಪ ನಟವರ್ ಶ್ಯಾಮ್ ಅವರು, ಶೀತಲ್ ಮತ್ತು ಅವರ ಕುಟುಂಬವನ್ನೂ ನೋಡಿಕೊಂಡರು. ಶೀತಲ್ ಅವರು ಓಂ ಕಾರಾನಂದ ಶಾಲೆಯಲ್ಲಿ ಓದಿದರು. ನಂತರ ಕೆನಡಾದಲ್ಲಿ ಹೆಚ್ಚಿನ ಅಧ್ಯಯನ ಕೈಗೊಂಡು, ಪೂರ್ಣಗೊಳಿಸಿದರು.