ಭೋಪಾಲ್ (ಮಧ್ಯಪ್ರದೇಶ):ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ಶಿವರಾಜ್ ಸರ್ಕಾರವು ಮತ್ತೆ ಮೂವರು ನೂತನ ಸಚಿವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದೆ. ಭೋಪಾಲ್‌ನ ರಾಜಭವನದಲ್ಲಿ ಇಂದು (ಶನಿವಾರ) ಬೆಳಗ್ಗೆ 8.45ಕ್ಕೆ ಮಾಜಿ ಸಚಿವ ಹಾಗೂ ಶಾಸಕ ರಾಜೇಂದ್ರ ಶುಕ್ಲಾ, ಗೌರಿಶಂಕರ್ ಬಿಸೇನ್ ಮತ್ತು ರಾಹುಲ್ ಲೋಧಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ಮಂಗೂಭಾಯಿ ಪಟೇಲ್ ಮೂವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯಾಧ್ಯಕ್ಷ ವಿ.ಡಿ. ಶರ್ಮಾ ಸೇರಿದಂತೆ ಹಲವು ಹಿರಿಯ ನಾಯಕರು ಉಪಸ್ಥಿತರಿದ್ದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ರಾಹುಲ್ ಲೋಧಿ ಅವರು ಸಿಎಂ ಶಿವರಾಜ್ ಅವರ ಪಾದ ಸ್ಪರ್ಶಿಸಿ ನಮಸ್ಕರಿಸಿದರು.
ಉಮಾಭಾರತಿ ಅವರ ಸೋದರಳಿಯ ರಾಹುಲ್ ಲೋಧಿ:ಗೌರಿಶಂಕರ್ ಬಿಸೇನ್ ಅವರು ಬಾಲಘಾಟ್‌ನಿಂದ 7 ನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ ಎಂಬುದನ್ನು ಗಮನಿಸಬಹುದು. ರಾಜೇಂದ್ರ ಶುಕ್ಲಾ ರೇವಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಹುಲ್ ಸಿಂಗ್ ಲೋಧಿ ಒಂದು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರು 2018ರಲ್ಲಿ ಖರ್ಗಾಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದರು. ರಾಹುಲ್ ಮಾಜಿ ಸಿಎಂ ಉಮಾಭಾರತಿ ಅವರ ಸೋದರಳಿಯ. ಲೋಧಿ ಸಮುದಾಯದ ಮತ ಬ್ಯಾಂಕ್ಗಾಗಿ ರಾಹುಲ್ ಲೋಧಿ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.