ಭೋಪಾಲ್ (ಮಧ್ಯಪ್ರದೇಶ): ಬಿಜೆಪಿಯ ಹಿರಿಯ ನಾಯಕ ಮತ್ತ ಸಂಸದ ಜನಾರ್ಧನ್ ಮಿಶ್ರಾ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿ ಅಥವಾ ಯಾವುದೇ ಆಯುಕ್ತರಿಗೆ ಕಪಾಳಕ್ಕೆ ಬಾರಿಸಿದರೆ ಒಬ್ಬ ರಾಜಕೀಯ ನಾಯಕನಾಗಿ ಒಂದೆರಡು ವರ್ಷಗಳ ಕಾಲದಲ್ಲೇ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದಾರೆ.! ರೇವಾ ಕ್ಷೇತ್ರದ ಸಂಸದ ಮಿಶ್ರಾ ಕಾರ್ಯಕ್ರಮವೊಂದಲ್ಲಿ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ರಾಜಕೀಯ ನಾಯಕನಾಗಿ ಪ್ರಾಮುಖ್ಯತೆ ಪಡೆಯುವುದು ಹೇಗೆ ಎಂಬುವುದನ್ನು ಈ ರೀತಿಯಲ್ಲಿ ವಿವರಿಸಿದರು.
'ನಮ್ಮ ಕಾಲದಲ್ಲಿ ಜನರು ರಾಜಕಾರಣಿ ಎಂದು ಗುರುತಿಸಿಕೊಳ್ಳಲು ಜಿಲ್ಲಾಧಿಕಾರಿ ಅಥವಾ ಆಯುಕ್ತರಿಗೆ ಕಪಾಳಮೋಕ್ಷ ಮಾಡುತ್ತಿದ್ದರು. ಹಿರಿಯ ಅಧಿಕಾರಿಗಳಿಗೆ ಬಾರಿಸಿದರೆ ನಾವು ಮುಂದಿನ ಒಂದೆರಡು ವರ್ಷಗಳಲ್ಲೇ ರಾಜಕೀಯ ನಾಯಕರಾಗಿ ಬೆಳೆಯಬಹುದು ಎಂಬುದೂ ನಮಗೆ ಗೊತ್ತಿತ್ತು. ಇಂತಹ ಅವಕಾಶವನ್ನು ಎಂದೂ ಕಳೆದುಕೊಳ್ಳುತ್ತಿರಲಿಲ್ಲ' ಎಂದು ಹೇಳಿದ್ದಾರೆ.