ಭೋಪಾಲ್(ಮಧ್ಯಪ್ರದೇಶ):ಮದುವೆಯ ನೆಪದಲ್ಲಿ ಇಬ್ಬರೂ ಬೇರೆ ಬೇರೆ ಸಂದರ್ಭಗಳಲ್ಲಿ ಯುವತಿಯ ಮೇಲೆ ಅತ್ಯಾಚಾರ ಎಸಗಿರುವ ಕುರಿತು ನಿಶಾತ್ಪುರ ಠಾಣೆಯಲ್ಲಿ ತಂದೆ ಮತ್ತು ಮಗನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಮದುವೆಯ ಭರವಸೆ ನೀಡಿ ತನ್ನನ್ನು ದೈಹಿಕ ಶೋಷಣೆ ಮಾಡಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸಂತ್ರಸ್ತೆಯ ದೂರಿನ ಮೇರೆಗೆ ತಂದೆ ಮತ್ತು ಮಗನ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಛೋಲಾ ಮಂದಿರ ಪ್ರದೇಶದ ನಿವಾಸಿಯಾಗಿದ್ದು, ಆಕೆ 2019 ರಿಂದ ಕಾಸ್ಮೆಟಿಕ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಇಬ್ರಾಹಿಂ ಅಲಿಯಾಸ್ ಸಮೀರ್ ಕೂಡ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಇಬ್ಬರಲ್ಲಿ ಸ್ನೇಹ ಬೆಳೆದು ಮುಂದೆ ಪ್ರೀತಿಗೆ ತಿರುಗಿದೆ. ಪ್ರೀತಿಗೆ ಮರುಳಾಗಿದ್ದ ಯುವತಿಯನ್ನು ಇಬ್ರಾಹಿಂ ಮದುವೆಯಾಗುವುದಾಗಿ ನಂಬಿಸಿ, ಅಂಗಡಿಯ ಗೋದಾಮಿಗೆ ಕರೆದು ದೈಹಿಕ ಹಿಂಸೆ ನೀಡುತ್ತಿದ್ದನು ಹಾಗೂ ಮಾರ್ಕೆಟ್ ಬಳಿಯ ಹೋಟೆಲ್‌ಗೆ ಭೇಟಿಯಾಗುವ ನೆಪದಲ್ಲಿ ತನಗೆ ಕರೆ ಮಾಡಿ ಹಲವು ಬಾರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಯುವತಿ ಮದುವೆಗೆ ಒತ್ತಾಯಿಸಿದಾಗ, ಇಬ್ರಾಹಿಂ ತನ್ನಿಂದ ದೂರಾಗಲು ಯತ್ನಿಸಿದನು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.