ಭೋಪಾಲ್ (ಮಧ್ಯಪ್ರದೇಶ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಕೈ ಜೋಡಿಸುವಂತೆ ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಅವರಿಗೆ ಆಹ್ವಾನ ನೀಡಿದ್ದು, ಇದಕ್ಕೆ ಉಮಾಭಾರತಿ ತೀಕ್ಷ್ಣವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ಸೇರುವಂತೆ ಕಮಲ್ ನಾಥ್ ಅವರು ನನ್ನನ್ನು ಆಹ್ವಾನಿಸಿದ್ದಾರೆ ಎಂದು ನಾನು ಪತ್ರಿಕೆಯಲ್ಲಿ ಓದಿದ್ದೇನೆ. ನನಗೆ ಇದು ತಮಾಷೆ ಎನಿಸಿದೆ. ನನಗೆ ಅಂತಹ ಜೋಕ್‌ಗಳ ಅಭ್ಯಾಸವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಉಮಾಭಾರತಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ಅಲ್ಲದೇ, ಕಮಲ್ನಾಥ್ ಅವರನ್ನು ಹಿರಿಯ ಸಹೋದರ ಎಂದೂ ಟ್ವೀಟ್ನಲ್ಲಿ ಬಿಜೆಪಿಯ ನಾಯಕಿ ಉಲ್ಲೇಖಿಸಿದ್ದಾರೆ.