ಇಂದೋರ್ (ಮಧ್ಯಪ್ರದೇಶ):ಮಧ್ಯಪ್ರದೇಶದ ಇಂದೋರ್ ನಗರ ದೇಶದಲ್ಲೇ ಅತಿ ಪ್ರಸಿದ್ಧಿ. ತನ್ನ ಸ್ವಚ್ಛತೆಯಿಂದಲೇ ಹೆಸರುವಾಸಿಯಾಗಿರುವ ಈ ನಗರದ ವರ್ತಕರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊಸ ಆಫರ್ ಘೋಷಿಸಿದ್ದಾರೆ. ಇದೇನಪ್ಪಾ ರಾಜಕೀಯ ಪಕ್ಷಗಳ ಹಾಗೆ ಇವರೂ ಕೂಡ ಭರವಸೆಗಳನ್ನು ಘೋಷಿಸಿದ್ರಾ ಅಂತೀರಾ.. ಒಂದು ರೀತಿ ಹಾಗೆಯೇ ಆದರೆ, ಅದರ ಹಿಂದೆ ಒಳ್ಳೆಯ ಕಾರಣವಿದೆ.
ರಾಜಸ್ಥಾನ, ಹರಿಯಾಣ, ತೆಲಂಗಾಣ, ಮಿಜೋರಾಂ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ನವೆಂಬರ್ 7 ರಿಂದ ಆರಂಭವಾಗಲಿದೆ. ಚುನಾವಣೆಯ ಜ್ವರ ಏರಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಪೈಪೋಟಿ ಇದೆ. ಹೀಗಾಗಿ ಮತದಾನ ಹೆಚ್ಚಳಕ್ಕಾಗಿ ಸರ್ಕಾರ ಸೇರಿದಂತೆ ಸಂಘಸಂಸ್ಥೆಗಳು ಅಭಿಯಾನ ನಡೆಸಿವೆ. ಇದೀಗ ಇಂದೋರ್‌ನಲ್ಲಿರುವ ವರ್ತಕರ ಸಂಘವೂ ಅಭಿಯಾನದ ಭಾಗವಾಗಿದ್ದು, ವಿಶೇಷ ಆಫರ್ ಪ್ರಕಟಿಸಿದೆ.
ಅವಲಕ್ಕಿ, ಜಿಲೇಬಿ ಫ್ರೀ:ರಾಜಕೀಯ ಪಕ್ಷಗಳು ಈಗಾಗಲೇ ಮತದಾರರನ್ನು ಸೆಳೆಯಲು ಹಲವು 'ಉಚಿತ'ಗಳನ್ನು ಘೋಷಿಸಿವೆ. ಅದರಂತೆ ವರ್ತಕರ ಸಂಘವೂ ಫ್ರೀ ಆಫರ್ ನೀಡಿದೆ. ಮತದಾನ ದಿನದಂದು ಯಾರು ಬೆಳಗ್ಗೆ 9 ಗಂಟೆಯೊಳಗೆ ಬಂದು ಮತದಾನ ಮಾಡುತ್ತಾರೋ ಅವರಿಗೆ ಒಗ್ಗರಣೆ ಅವಲಕ್ಕಿ ಮತ್ತು ಜಿಲೇಬಿಯನ್ನು ಉಚಿತವಾಗಿ ನೀಡಲಿದೆ. 6 ರ ಬಳಿಕ ಮತದಾನ ಮಾಡಿದಲ್ಲಿ ಅವರಿಗೆ ಶೇ.10 ರಿಯಾಯಿತಿ ದರದಲ್ಲಿ ತಿಂಡಿ, ಸ್ವೀಟ್ ಸಿಗಲಿದೆ ಎಂದು ಹೇಳಿದೆ.