ಚಿಂದ್ವಾರ (ಮಧ್ಯಪ್ರದೇಶ):ಆಸ್ತಿ ತೆರಿಗೆ ಪಾವತಿಸದ ಕಾರಣ ಇಲ್ಲಿಯ ಅಸಾರಾಂ ಬಾಪುಗೆ ಸೇರಿದ ಆಶ್ರಮದ ಆಸ್ತಿಯನ್ನು ಜಪ್ತಿ ಮಾಡುವ ಬಗ್ಗೆ ನಗರಸಭೆ ಆಯುಕ್ತ ರಾಹುಲ್ ಸಿಂಗ್ ಕಂದಾಯ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಸಾರಾಂ ಆಶ್ರಮ ಹಾಗೂ ಗುರುಕುಲ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆ ನಗರಸಭೆ ಅಸಾರಾಂ ಆಸ್ತಿ ಜಪ್ತಿಗೆ ಮುಂದಾಗಿದೆ.
ಈ ಬಗ್ಗೆ ಕಂದಾಯ ಅಧಿಕಾರಿ ಸಾಜಿದ್ ಖಾನ್ ಮಾತನಾಡಿ, ಚಿಂದ್ವಾರ ನಗರದ ವಾರ್ಡ್ ನಂ.46 ಮತ್ತು ವಾರ್ಡ್ ನಂ.3ರಲ್ಲಿ ಅಸಾರಾಂ ಅವರಿಗೆ ಸೇರಿದ ಜಮೀನು ಮತ್ತು ಆಸ್ತಿ ಇದೆ. ವಾರ್ಡ್ ನಂ.3ರಲ್ಲಿ ರೂ 4,80986 ಆಸ್ತಿ ತೆರಿಗೆ ಬಾಕಿ ಇದ್ದು, ವಾರ್ಡ್ ನಂ.46ರಲ್ಲಿ ರೂ, 9,88401 ರೂ. ಆಸ್ತಿ ತೆರಿಗೆ ಬಾಕಿ ಇದೆ. ವಾರ್ಡ್ ನಂ46ರಲ್ಲಿ ಅಜಯ್ ರಸಿಕಲಾಲ್ ಶಾ ಶಕ್ತಿ ಟ್ರೇಡರ್ಸ್ ಹೆಸರಿನಲ್ಲಿದೆ. ಈ ವಾರ್ಡಗಳಲ್ಲಿ ಸುಮಾರು 3 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿದಿದ್ದು, ಇದಕ್ಕಾಗಿ ನಗರಸಭೆ ಲೆಕ್ಕಪರಿಶೋಧನಾ ವರದಿಯನ್ನು ಕೇಳಿದೆ ಎಂದು ಹೇಳಿದರು.
ಶಿಕ್ಷಣ ಅಥವಾ ಸಾಮಾನ್ಯ ಜನರ ಅನುಕೂಲಕ್ಕಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಿದರೆ ಸರ್ಕಾರವು ತೆರಿಗೆಯಲ್ಲಿ ವಿನಾಯಿತಿ ನೀಡುತ್ತದೆ. ಹಾಗಾಗಿ ಲೆಕ್ಕಪರಿಶೋಧನಾ ವರದಿಯನ್ನು ಕೇಳಲಾಗಿದೆ. ಸರ್ಕಾರದಿಂದ ತೆರಿಗೆಯಲ್ಲಿ ವಿನಾಯಿತಿ ನೀಡುವ ಯಾವುದೇ ಅವಕಾಶವಿದ್ದರೆ ನೀಡಿ ಉಳಿದ ತೆರಿಗೆ ವಸೂಲಿ ಮಾಡಲಾಗುತ್ತದೆ. ಇವೆಲ್ಲವನ್ನು ಪರಿಶೀಲಿಸಿ 1 ತಿಂಗಳ ನಂತರ ಆಸ್ತಿ ಜಪ್ತಿಗೆ ನೋಟಿಸ್ ಲಗತ್ತಿಸಲಾಗುವುದು. ಈಗಾಗಲೇ ಅಸಾರಾಂ ಆಶ್ರಮ ಮತ್ತು ಗುರುಕುಲವನ್ನು 1 ತಿಂಗಳ ಕಾಲ ನಗರಸಭೆಗೆ ಹಸ್ತಾಂತರಿಸಲಾಗಿದ್ದು, ತೆರಿಗೆ ಜಮಾ ಮಾಡುವಂತೆ ನೋಟಿಸ್ ಸಹ ನೀಡಲಾಗಿದೆ. ಕಾಲಮಿತಿಯೊಳಗೆ ಆಶ್ರಮದಿಂದ ತೆರಿಗೆ ಜಮಾ ಮಾಡದಿದ್ದರೆ ಆಸ್ತಿ ಜಪ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.