ಕೋಲ್ಕತ್ತಾ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ವಸತಿ ಫ್ಲಾಟ್‌ಗಳ ಹೆಸರಲ್ಲಿ 28 ಕೋಟಿ ರೂಪಾಯಿ ವಂಚನೆ ಮಾಡಿರುವ ಬಗ್ಗೆ ಪೊಲೀಸರು, ಜಾರಿ ನಿರ್ದೇಶನಾಲಯ, ನ್ಯಾಯಾಲಯಕ್ಕೆ ನುಸ್ರತ್ ಜಹಾನ್ ವಿರುದ್ಧ ದೂರ ನೀಡಲಾಗಿದೆ.
ಉತ್ತರ 24 ಪರಗಣ ಜಿಲ್ಲೆಯ ನ್ಯೂ ಟೌನ್‌ನಲ್ಲಿ ವಸತಿ ಫ್ಲಾಟ್‌ಗಳ ಹೆಸರಿನಲ್ಲಿ ಒಟ್ಟು 429 ಜನರಿಗೆ ವಂಚಿಸಲಾಗಿದೆ ಎಂದು ದೂರಲಾಗಿದೆ. ನಟಿ, ಸಂಸದೆ ನುಸ್ರತ್ ಜಹಾನ್ ಗರಿಯಾಹತ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಈ ಸಂಸ್ಥೆಯ ನಿರ್ದೇಶಕರಲ್ಲಿ ನುಸ್ರತ್ ಜಹಾನ್ ಕೂಡ ಒಬ್ಬರು. ಹೀಗಾಗಿ, ವಂಚನೆಗೊಳಗಾದವರು ಗರಿಯಾಹತ್ ಪೊಲೀಸ್ ಠಾಣೆಯಲ್ಲಿ ವಂಚನೆ ಆರೋಪದಡಿ ಲಿಖಿತ ದೂರು ದಾಖಲಿಸಿದ್ದಾರೆ. ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಅಲಿಪುರ ನ್ಯಾಯಾಲಯದಲ್ಲಿ ಪ್ರಕರಣವೂ ದಾಖಲಾಗಿದೆ.
ನುಸ್ರತ್ ಜಹಾನ್ ಕಂಪನಿಯು ವಸತಿ ಗೃಹಗಳ ಹೆಸರಿನಲ್ಲಿ ತಲಾ 5 ಲಕ್ಷ 55 ಸಾವಿರ ರೂ.ಗಳನ್ನು ತೆಗೆದುಕೊಂಡಿದೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಹಣವನ್ನು ತೆಗೆದುಕೊಳ್ಳುವ ಸಮಯದಲ್ಲಿ 2018ರಲ್ಲಿ 3 ಬಿಎಚ್‌ಕೆ ಫ್ಲಾಟ್ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಇದಾಗಿ ಐದು ವರ್ಷ ಕಳೆದರೂ ಇನ್ನೂ ವಸತಿ ಸೌಲಭ್ಯ ಸಿಕ್ಕಿಲ್ಲ. ಆದ್ದರಿಂದ ಪೊಲೀಸ್ ಹಾಗೂ ಕಾನೂನು ಮೊರೆ ಹೋಗಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.