ಭಿಂದ್(ಮಧ್ಯಪ್ರದೇಶ):ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಜಿಲ್ಲೆಯ ಜೈಲಿನ ಗೋಡೆ ಕುಸಿದು 22 ಕೈದಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸೆಲ್ ನಂಬರ್ 6 ರಲ್ಲಿ ಈ ಅವಘಡ ಸಂಭವಿಸಿದೆ ಎಂದು ಭಿಂದ್ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್ ಹೇಳಿದ್ದಾರೆ.
ಘಟನೆಯಲ್ಲಿ 22 ಕೈದಿಗಳು ಗಾಯಗೊಂಡಿದ್ದು, ಓರ್ವನ ಸ್ಥಿತಿ ಚಿಂತಾಜನಕವಾಗಿದೆ. ಗಂಭೀರವಾಗಿ ಗಾಯಗೊಂಡವರಿಗೆ ಗ್ವಾಲಿಯರ್ನ ಉನ್ನತ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆಯ ಸಮಯದಲ್ಲಿ ಜೈಲಿನೊಳಗೆ 255 ಮಂದಿ ಕೈದಿಗಳಿದ್ದರು. ನಮಗೆ ಮಾಹಿತಿ ದೊರೆತ ಕೂಡಲೇ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದೇವೆ ಎಂದು ಸಿಂಗ್ ತಿಳಿಸಿದ್ದಾರೆ.