ಕರ್ನಾಟಕ

karnataka

ಅಮ್ಮಾ ಎಂದರೆ ಅಮೃತದ ಕಡಲು! ಹೆತ್ತವ್ವನ ಮಮತೆ, ತ್ಯಾಗ ಸಾರುವ ದಿನ

By

Published : May 14, 2023, 8:00 AM IST

ವಿಶ್ವಾದ್ಯಂತ ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರ ಆಚರಿಸಲಾಗುತ್ತದೆ. ತಾಯಿಯ ನಿಷ್ಕಲ್ಮಷ ಪ್ರೀತಿ, ತ್ಯಾಗದ ಮಹತ್ವ ಸಾರುವುದೇ ದಿನದ ಉದ್ದೇಶ.

Representative image
ಪ್ರಾತಿನಿಧಿಕ ಚಿತ್ರ

Mothers Day 2023: ಮೇ 14 ವಿಶ್ವ ತಾಯಂದಿರ ದಿನ. ವಾತ್ಸಲ್ಯ, ಮಮತೆ ಇವುಗಳ ಪ್ರತಿರೂಪವೇ ಅಮ್ಮ. ಅವಳ ಆಶೀರ್ವಾದವಿದ್ದರೆ ಎಂಥಹುದೇ ಸೋಲನ್ನೂ ಸೋಲಿಸಬಹುದು. ದಣಿವರಿಯದೇ ದುಡಿಯುವ ಅಮ್ಮ ಇಡೀ ಕುಟುಂಬ ವ್ಯವಸ್ಥೆಯ ಬೇರು. ಈ ವಿಶೇಷ ದಿನದಂದು ಅವಳಿಗೆ ಪ್ರೀತಿಯ ಶುಭಾಶಯ ತಿಳಿಸಿ.

ಅಮ್ಮನ ದಿನಕ್ಕೆ ಡೂಡಲ್ ವಿಶೇಷ ಗೂಗಲ್‌:ಜಾಗತಿಕ ದೈತ್ಯ ಸರ್ಚ್‌ ಎಂಜಿನ್ ಗೂಗಲ್​ ಆಗಾಗ್ಗೆ ವಿಶೇಷ ಡೂಡಲ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತದೆ. ವಿಶೇಷ ಆಚರಣೆಗಳು, ಸಾಧಕರ ಜನ್ಮದಿನ ಹಾಗೂ ಐತಿಹಾಸಿಕ ಮಹತ್ವದ ಸಂದರ್ಭಗಳನ್ನು ಡೂಡಲ್​ನಲ್ಲಿ ಫೋಟೋ, ಆ್ಯನಿಮೇಷನ್ ಹಾಕುವ ಮೂಲಕ ಆಚರಿಸುತ್ತದೆ. ಅದೇ ರೀತಿ ಇಂದು ವಿಶ್ವ ತಾಯಂದಿರ ದಿನಾಚರಿಸುತ್ತಿದೆ.

ವಾತ್ಸಲ್ಯದ ಮಡಿಲು: "ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ತಾಯಿಯನ್ನು ದೇವರಿಗಿಂತ ಹೆಚ್ಚು ಎಂದು ಪೂಜಿಸಲಾಗುತ್ತಿತ್ತು. ಬಡತನದಲ್ಲಿದ್ದರೂ ತಮ್ಮ ಮಕ್ಕಳನ್ನು ಸಮಾಜದಲ್ಲಿ ಆದರ್ಶವಾಗಿ ಕಾಣುವಂತೆ ಪೋಷಿಸಿದ ಇಂತಹ ಅನೇಕ ತಾಯಂದಿರ ವರ್ಣನೆ ನಮ್ಮ ಪುರಾಣಗಳಲ್ಲಿದೆ. ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮನನ್ನಾಗಿ ಬೆಳೆಸಿದ ಕೌಸಲ್ಯೆ ಇದಕ್ಕೆ ಉತ್ತಮ ನಿದರ್ಶನ. ಕೇವಲ ಹೆತ್ತವಳಷ್ಟೇ ತಾಯಿಯಲ್ಲ, ಪೋಷಿಸಿದವಳು ತಾಯಿ ಎಂಬುವುದನ್ನು ನಿರೂಪಿಸಿದೆ ಯಶೋಧೆಯ ವಾತ್ಸಲ್ಯ".

ತಾಯಂದಿರ ದಿನದ ಉದ್ದೇಶ:ಅಮೆರಿಕದಲ್ಲಿ 1908ರಲ್ಲಿ ಪ್ರಾರಂಭವಾಗಿದ್ದು ಇಂದಿಗೂ ಆಚರಣೆಯಲ್ಲಿದೆ. ಈ ದಿನದ ಪ್ರಮುಖ ಉದ್ದೇಶವೆಂದರೆ ತಾಯಿಯ ಪ್ರೀತಿ, ತ್ಯಾಗ ಹಾಗೂ ಮಹತ್ವವನ್ನು ಜನರಿಗೆ ತಿಳಿಸಿಕೊಡುವುದಾಗಿದೆ. ಈ ದಿನವನ್ನು ಸಾಮಾನ್ಯವಾಗಿ ಭಾರತ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಸೇರಿದಂತೆ ಹಲವು ದೇಶಗಳಲ್ಲಿ ಮೇ ತಿಂಗಳ 2ನೇ ಭಾನುವಾರ ಆಚರಿಸಲಾಗುತ್ತದೆ.

ಇತಿಹಾಸವೇನು?:ತಾಯಂದಿರ ದಿನವನ್ನು ಎಂದಿನಿಂದ ಆಚರಿಸಲಾಗುತ್ತಿದೆ? ಇದರ ಇತಿಹಾಸವೇನು? ಎಂಬ ಬಗ್ಗೆ ಹಲವಾರು ಮಂದಿ ಹಲವು ರೀತಿಯ ಅಭಿಪ್ರಾಯ ಹೊಂದಿದ್ದಾರೆ. ಕೆಲವರ ಪ್ರಕಾರ ಆರಂಭದಲ್ಲಿ ಪ್ರಾಚೀನ ಗ್ರೀಕರು ಮತ್ತು ರೋಮನ್ನರು ಈ ವಿಶೇಷ ದಿನವನ್ನು ಆಚರಿಸುತ್ತಿದ್ದರು. ಅವರು ಮಾತೃ ದೇವತೆಗಳಾದ ರಿಯಾ ಮತ್ತು ಸೈಬೆಲೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸುತ್ತಿದ್ದರು. ಪ್ರಾಚೀನ ಕಾಲದಲ್ಲಿ, ಗ್ರೀಕರು ಮತ್ತು ರೋಮನ್ನರು ಮಾತೃ ದೇವತೆಗಳಾದ ರಿಯಾ ಮತ್ತು ಸೈಬೆಲೆಯ ಗೌರವಾರ್ಥವಾಗಿ ಹಬ್ಬಗಳನ್ನು ನಡೆಸುತ್ತಿದ್ದರು.

20ನೇ ಶತಮಾನದ ಆರಂಭದಲ್ಲಿ ತಾಯಂದಿರ ದಿನ 1908ರಲ್ಲಿ ಅಮೆರಿಕದಲ್ಲಿ ಶುರುವಾಗಿತ್ತು. ಅಮೆರಿಕದ ಶಾಂತಿ ಕಾರ್ಯಕರ್ತೆಯಾಗಿದ್ದ ಅನ್ನಾ ಜಾರ್ವಿಸ್ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ಮದುವೆ ಆಗಿರಲಿಲ್ಲ. 1905ರಲ್ಲಿ ಅನ್ನಾ ತಾಯಿ ಮರಣ ಹೊಂದಿದರು. ತನ್ನ ತಾಯಿಯ ಮೇಲಿದ್ದ ಪ್ರೀತಿ ವ್ಯಕ್ತಪಡಿಸಲು ಈ ದಿನ ಆಯ್ಕೆ ಮಾಡಿಕೊಂಡಿದ್ದರು. ಬಳಿಕ ಇದೇ ದಿನವನ್ನು ತಾಯಂದಿರ ದಿನವಾಗಿ ಆಚರಿಸಲು ಶುರು ಮಾಡಿದ್ದರು.

ಶಾಂತಿ ಕಾರ್ಯಕರ್ತರಾಗಿದ್ದ ಅನ್ನಾ ಅಂತರ್ಯುದ್ಧದ ಸಮಯದಲ್ಲಿ ಗಾಯಗೊಂಡ ಸೈನಿಕರನ್ನು ನೋಡಿಕೊಳ್ಳಲು ಮದರ್ಸ್ ಡೇ ವರ್ಕ್ ಕ್ಲಬ್ ಸ್ಥಾಪಿಸಿದರು. ಅನ್ನಾ ಜಾರ್ವಿಸ್ ಈ ದಿನದ ಮೂಲಕ ತನ್ನ ಕುಟುಂಬ ಮತ್ತು ದೇಶಕ್ಕೆ ತನ್ನ ತಾಯಿಯ ಸಮರ್ಪಣೆ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸಲು ಬಯಸಿದ್ದರು. ಅನ್ನಾ ಜಾರ್ವಿಸ್ ಪ್ರಯತ್ನದಿಂದ 1914 ರಲ್ಲಿ ಅಮೆರಿಕದ 28ನೇ ಅಧ್ಯಕ್ಷ ವುಡ್ರೋ ವಿಲ್ಸನ್ ತಾಯಂದಿರ ದಿನವನ್ನು ಅಧಿಕೃತವಾಗಿ ಘೋಷಿಸಿದರು. ಅಂದಿನಿಂದ, ಪ್ರತಿ ವರ್ಷ ಮೇ ತಿಂಗಳ 2ನೇ ಭಾನುವಾರದಂದು ವಿಶ್ವದಾದ್ಯಂತ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.

ಮಹತ್ವ: ವಿವಿಧ ದೇಶಗಳಲ್ಲಿ ವಿಭಿನ್ನ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳು ಚಾಲ್ತಿಯಲ್ಲಿದ್ದರೂ, ತಾಯಂದಿರ ದಿನದ ಆಚರಣೆಯ ಹಿಂದಿನ ಭಾವನೆ ಒಂದೇ ಆಗಿರುತ್ತದೆ. ನಮ್ಮ ತಾಯಿಯ ಬಗ್ಗೆ ನಮ್ಮ ಪ್ರೀತಿ ಮತ್ತು ಆಕೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ವಿಶೇಷ ದಿನವಿದು.

ಭಾರತದಲ್ಲಿ ತಾಯಂದಿರ ದಿನ:ದೇಶದಲ್ಲಿ ತಾಯಂದಿರನ್ನು ಯಾವಾಗಲೂ ಗೌರವಿಸಲಾಗುತ್ತದೆ. ಇದು ತಾಯಂದಿರು ಮಾತ್ರವಲ್ಲ. ಬದಲಾಗಿ ಅಜ್ಜಿ, ಚಿಕ್ಕಮ್ಮ ಮತ್ತು ಅತ್ತೆಯರಿಗೂ ಈ ದಿನ ಮೀಸಲು. ನಮ್ಮನ್ನು ಈ ಜಗತ್ತಿಗೆ ತರುವ ತಾಯಿಗೆ ಗೌರವ ಹಾಗೂ ಪ್ರೀತಿಯನ್ನು ತೋರಿಸಲು ನಮಗೆ ಯಾವುದೇ ವಿಶೇಷ ದಿನ ಅಗತ್ಯವಿಲ್ಲ. ಆದರೆ ತಾಯಂದಿರ ದಿನ ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶ ನೀಡುತ್ತದೆ.

ಬದುಕಿಗೆ ಸ್ಫೂರ್ತಿ ನೀಡಿದ ಭಾರತೀಯ ತಾಯಂದಿರು:

  • ಮದರ್ ತೆರೇಸಾ: ಬಡವರು ಮತ್ತು ಅಶಕ್ತರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು ಮದರ್‌ ತೆರೇಸಾ. ನಿಸ್ವಾರ್ಥತೆ, ಸಹಾನುಭೂತಿ ಮತ್ತು ಇತರರಿಗೆ ಸಹಾಯ ಮಾಡುವ ಅಚಲ ಬದ್ಧತೆ ಅವರನ್ನು ಸ್ಫೂರ್ತಿದಾಯಕ ವ್ಯಕ್ತಿಯಾಗಿ ಮಾಡಿದೆ.
  • ಕಲ್ಪನಾ ಚಾವ್ಲಾ: ಇವರು ಬಾಹ್ಯಾಕಾಶಕ್ಕೆ ತೆರಳಿದ ಭಾರತೀಯ ಮೂಲದ ಮೊದಲ ಮಹಿಳೆ. ಇವರ ಧೈರ್ಯ ಮತ್ತು ಬಾಹ್ಯಾಕಾಶ ಪರಿಶೋಧನೆಯ ಉತ್ಸಾಹ ಅಡೆತಡೆಗಳನ್ನು ಮುರಿಯಲು ಬಯಸುವ ತಾಯಂದಿರು ಮತ್ತು ಹೆಣ್ಣು ಮಕ್ಕಳಿಗೆ ಪ್ರೇರಣೆ.
  • ಸುಧಾ ಮೂರ್ತಿ :ಹೆಸರಾಂತ ಲೇಖಕಿ ಮತ್ತು ಸಮಾಜ ಸೇವಕಿ. ಇವರ ಬರಹಗಳು ಮತ್ತು ದತ್ತಿ ಕಾರ್ಯ, ಶಿಕ್ಷಣ, ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
  • ಕಿರಣ್ ಬೇಡಿ:ನಿವೃತ್ತ ಪೊಲೀಸ್ ಅಧಿಕಾರಿ. ಭಾರತೀಯ ಪೊಲೀಸ್ ಸೇವೆಗೆ (IPS) ಸೇರಿದ ಮೊದಲ ಮಹಿಳೆ.
  • ಮೇರಿ ಕೋಮ್:ಭಾರತದ ಹೆಸರಾಂತ ಬಾಕ್ಸರ್ ಮತ್ತು ಒಲಿಂಪಿಕ್ ಕಂಚಿನ ಪದಕ ವಿಜೇತೆ. ತನ್ನ ಬಾಕ್ಸಿಂಗ್ ವೃತ್ತಿಜೀವನವನ್ನು ಮಾತೃತ್ವದೊಂದಿಗೆ ಸಮತೋಲನಗೊಳಿಸುವುದು ಸೇರಿದಂತೆ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ, ಅವರು ತಮ್ಮ ಕ್ಷೇತ್ರದಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ.
  • ಲತಾ ಮಂಗೇಶ್ಕರ್: ಭಾರತದ ನೈಟಿಂಗೇಲ್ ಎಂದೂ ಕರೆಯಲ್ಪಡುವ ಲತಾ ಮಂಗೇಶ್ಕರ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಪ್ರಸಿದ್ಧ ಹಿನ್ನೆಲೆ ಗಾಯಕಿ. ಮಧುರ ಧ್ವನಿ ಮತ್ತು ಅವರ ಕರಕುಶಲತೆಯ ಸಮರ್ಪಣೆ ಭಾರತೀಯ ಸಂಗೀತದಲ್ಲಿ ಅವರನ್ನು ಅಪ್ರತಿಮ ವ್ಯಕ್ತಿಯಾಗಿ ರೂಪಿಸಿದೆ.

ಶುಭ ಸಂದೇಶ ಕಳುಹಿಸಿ..:

  1. ವಿಶ್ವದ ಅತ್ಯಂತ ಅದ್ಭುತ ತಾಯಿಗೆ ತಾಯಂದಿರ ದಿನದ ಶುಭಾಶಯಗಳು. ನಿಮ್ಮ ಪ್ರೀತಿ, ಕಾಳಜಿ ಮತ್ತು ಬೆಂಬಲ ಎಲ್ಲವೂ ನನಗೆ ಸರ್ವಸ್ವ. ನನ್ನ ಪ್ರತಿ ಹೆಜ್ಜೆಯಲ್ಲೂ ನನ್ನೊಂದಿಗೆ ಇದ್ದುದಕ್ಕಾಗಿ ಧನ್ಯ.
  2. ಸುಂದರ ಮತ್ತು ಸ್ನೇಹ ಜೀವಿ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು. ನಿಮ್ಮ ಕೊನೆಯಿಲ್ಲದ ಪ್ರೀತಿ ಮತ್ತು ಸಮರ್ಪಣೆಯಿಂದ ನೀವು ಪ್ರತಿದಿನ ನನಗೆ ಸ್ಫೂರ್ತಿ ನೀಡುತ್ತೀರಿ.
  3. ನನ್ನನ್ನು ಬೆಳೆಸಲು ತುಂಬಾ ತ್ಯಾಗ ಮಾಡಿದ ಮಹಿಳೆಗೆ ತಾಯಂದಿರ ದಿನದ ಶುಭಾಶಯಗಳು. ನಿಮ್ಮ ಪ್ರೀತಿ ಇಂದು ನಾನು ಏನಾಗಿದ್ದೇನೊ ಅದಕ್ಕೆ ಕಾರಣ. ಎಲ್ಲದಕ್ಕೂ ಧನ್ಯವಾದಗಳು ಅಮ್ಮ. ನಿಮ್ಮ ದಿನವು ಸಂತೋಷ ಮತ್ತು ಸಂಭ್ರಮದಿಂದ ಕೂಡಿರಲಿ ಎಂದು ನಾನು ಭಾವಿಸುತ್ತೇನೆ.
  4. ಹ್ಯಾಪಿ ಮದರ್ಸ್ ಡೇ! ನೀವು ಅದ್ಭುತ ತಾಯಿ ಮಾತ್ರವಲ್ಲ, ಪ್ರೀತಿಯ ಹೆಂಡತಿ, ಮಹಿಳೆ ಮತ್ತು ನನ್ನ ಉತ್ತಮ ಸ್ನೇಹಿತೆ. ಪದಗಳು ವರ್ಣಿಸುವುದಕ್ಕಿಂತ ಹೆಚ್ಚಾಗಿ ನಾನು ನಿನ್ನನ್ನು ಪ್ರೀತಿಸುತ್ತೇನೆ..

ಇಂದು ಮಮ್ಮಿಯಾಗಿದ್ದಾಳೆ ಅಷ್ಟೇ... :ಅಮ್ಮ ಎಂದಿಗೂ ಬದಲಾಗದ ಜೀವ. ಆದರೆ ಅಮ್ಮ ನಿರ್ವಹಿಸುವ ಪಾತ್ರಗಳು ಬದಲಾಗಿವೆ. ಬದಲಾದ ಕಾಲ ಘಟ್ಟದಲ್ಲಿ ಅಮ್ಮನ ಪರಿಸ್ಥಿತಿಯನ್ನು ನಿಭಾಯಿಸುವ ಸಂದರ್ಭಗಳು ಬದಲಾಯಿಸಿವೆ. ದುಡಿಮೆ, ಸಂಸಾರ, ಜೀವನದ ಮಜಲುಗಳು ಇಂದಿನ ಹೆಣ್ಣು ಮಕ್ಕಳನ್ನು ಬೇರೊಂದು ದಾರಿಯಲ್ಲಿ ನಡೆಸುತ್ತಿವೆ. "ಆಡಿ ಬಾ ನನ್ನ ಕಂದ, ಅಂಗಾಲ ತೊಳೆದೇನು ತೆಂಗಿನ ಕಾಯಿ ತಿಳಿನೀರ, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಬಂಗಾರದ ಮೊರೆ ತೊಳೆದೇನಾ..."ಎಂದು ಅಂದಿನ ತಾಯಂದಿರು ಹಾಡುತ್ತಿದ್ದರೆ, ಅವರಿಗೆ ಸಮಯವಿತ್ತು. ತನ್ನ ಕಂದನ ಸಾಕುವ ಖುಷಿಯಿತ್ತು. ಇಂದಿನ ತಾಯಂದಿರಿಗೆ ಮಗುವನ್ನು ಸಾಕುವ ಮನಸ್ಸಿದೆ, ಸಮಯವಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು. ಅಮ್ಮ ಇಂದು ಮಮ್ಮಿಯಾಗಿದ್ದಾಳೆ ಅಷ್ಟೇ... ಪ್ರೀತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇಂದಿನ ಅಮ್ಮ ಸ್ಪರ್ಧಾ ಜಗತ್ತಿನ ಅಮ್ಮನಾಗಿದ್ದಾಳೆ. ಎಲ್ಲದರಲ್ಲಿಯೂ ಸ್ಪರ್ಧೆಯೇ ಸರಿ ಎನ್ನುವ ಅಮ್ಮನಾಗಿದ್ದಾಳೆ. ದುಡಿಮೆಯ ಜತೆ ಮಗು ಸಾಕುವ ದೊಡ್ಡ ಜವಾಬ್ದಾರಿ ಇಂದು ದುಡಿಯುವ ಹೆಣ್ಣುಮಕ್ಕಳ ಮೇಲೆ ಇದೆ.

ಇದನ್ನೂ ಓದಿ:ತಾಯಂದಿರ ದಿನ 2023: ಅಮ್ಮನಿಗೆ ವಿಶೇಷ ಉಡುಗೊರೆ ನೀಡಲು ಇಲ್ಲಿದೆ ಬೆಸ್ಟ್​ ಆಯ್ಕೆ

ABOUT THE AUTHOR

...view details