ಬಗಾಹಾ(ಬಿಹಾರ):ತಾಯಿಯೊಬ್ಬರು ತನ್ನ ಮಗನನ್ನು ರಕ್ಷಿಸಲು ಮೊಸಳೆಯೊಂದಿಗೆ ಹೋರಾಡಿದ ಘಟನೆ ಪಶ್ಚಿಮ ಚಂಪಾರಣ್ ಜಿಲ್ಲೆಯ ಬಗಾಹಾದ ಲೌಕರಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ವಾ ಬಾರಿ ಗ್ರಾಮದಲ್ಲಿ ನಡೆದಿದೆ. ನದಿ ದಾಟುತ್ತಿದ್ದಾಗ ಆಕಸ್ಮಿಕವಾಗಿ ಬಾಲಕ ಮೊಸಳೆ ಮೇಲೆ ಕಾಲಿಟ್ಟಿದ್ದಾನೆ. ಈ ವೇಳೆ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿದೆ. ಇದನ್ನು ನೋಡಿದ ತಾಯಿ ಮೊಸಳೆಯೊಂದಿಗೆ ಕಾದಾಡಿ ನಂತರ ಸಾವಿನ ಕಪಿಮುಷ್ಠಿಯಿಂದ ತನ್ನ ಮಗನನ್ನು ಕಾಪಾಡಿದ್ದಾರೆ. ಮೊಸಳೆ ದಾಳಿಯಿಂದ ಬಾಲಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಲಕನ ಮೇಲೆ ದಾಳಿ ಮಾಡಿದ ಮೊಸಳೆ: ಗಂಡಕ್ ನದಿಯಲ್ಲಿ ನೂರಾರು ಮೊಸಳೆಗಳಿವೆ. ಈ ಮೊಸಳೆಗಳು ಮಳೆಗಾಲದಲ್ಲಿ ಗಂಡಕ್ ನದಿಯ ಉಪನದಿಗಳನ್ನೂ ತಲುಪುತ್ತವೆ. ಆಗ ಸಾಮಾನ್ಯ ಜನರಿಗೆ ಅಪಾಯವನ್ನು ಉಂಟುಮಾಡುತ್ತವೆ. ಲೌಕರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಸುರ್ವಾ ಬರಿ ಗ್ರಾಮದ ಮೂಲಕ ಹಾದುಹೋಗುವ ತ್ರಿವೇಣಿ ಕಾಲುವೆಯನ್ನು ದಾಟುತ್ತಿದ್ದಾಗ 11 ವರ್ಷದ ನಿತೀಶ್ ಕುಮಾರ್ ಮೊಸಳೆ ಮೇಲೆ ಕಾಲಿಟ್ಟಿದ್ದಾನೆ. ಈ ವೇಳೆ ಮೊಸಳೆ ಬಾಲಕನ ಮೇಲೆ ದಾಳಿ ಮಾಡಿದೆ.
ಮೊಸಳೆ ಬಾಯಿಯಿಂದ ಮಗನನ್ನು ರಕ್ಷಿಸಿದ ತಾಯಿ:ಮೊಸಳೆ ದಾಳಿ ವೇಳೆ ಬಾಲಕನ ಜೊತೆ ತಾಯಿಯೂ ಇದ್ದರು. ಮೊಸಳೆಯ ಹಿಡಿತದಲ್ಲಿ ತನ್ನ ಮಗನನ್ನು ಕಂಡ ತಾಯಿ ತಕ್ಷಣವೇ ತನ್ನ ಪ್ರಾಣವನ್ನು ಲೆಕ್ಕಿಸದೆ ಮಗನ ಸಹಾಯಕ್ಕೆ ದೌಡಾಯಿಸಿದ್ದಾರೆ. ಬಳಿಕ ಮೊಸಳೆಯೊಂದಿಗೆ ಹೋರಾಡಿ ಆ ತಾಯಿ ದೊಣ್ಣೆಯಿಂದ ಹೊಡೆಯಲು ಪ್ರಾರಂಭಿಸಿದ್ದರು. ಆಗ ಮೊಸಳೆ ಬಾಲಕನನ್ನು ಬಿಟ್ಟು ತೆರಳಿತು. ಈ ಮೂಲಕ ತಾಯಿ ಶೌರ್ಯ ತೋರಿ ತನ್ನ ಮಗನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.