ಅನಂತಪುರ(ಆಂಧ್ರಪ್ರದೇಶ): ಕರುಳಿನ ಬಂಧವೇ ಅಂತಹದ್ದು. ತಾಯಿಯ ಮಮತೆಗೆ ಸರಿಸಾಟಿಯಾದ ಇನ್ನೊಂದು ಜೀವಿ ಇಡೀ ಪ್ರಪಂಚದಲ್ಲಿ ಮತ್ತೊಂದಿಲ್ಲ ಎಂಬ ಮಾತಿದೆ. ಈಗಾಗಲೇ ಅಂತಹ ಅನೇಕ ಜ್ವಲಂತ ಉದಾಹರಣೆಗಳು ನಮ್ಮ ಮುಂದೆ ನಡೆದು ಹೋಗಿದ್ದು, ಸದ್ಯ ಮತ್ತೊಂದು ಮನಕಲಕುವ ದೃಶ್ಯ ಸೆರೆಯಾಗಿದೆ.
ತನ್ನ ಮರಿ ಸತ್ತಿದ್ರೂ ಕೂಡ ತಾಯಿ ಕೋತಿ ಕಳೆದ ಮೂರು ದಿನಗಳಿಂದ ಅದರ ಮೃತದೇಹವನ್ನು ತನ್ನೊಂದಿಗೆ ಇರಿಸಿಕೊಂಡು ರೋಧಿಸುತ್ತಿದೆ. ಈ ಮನಕಲಕುವ ಘಟನೆ ನಡೆದಿರುವುದು ಆಂಧ್ರಪ್ರದೇಶದ ಅನಂತಪುರದ ಮುಡಿಗಬ್ಬ ಮಂಡಲದಲ್ಲಿ. ಮೂರು ದಿನಗಳ ಹಿಂದೆ ಮರಿ ಕೋತಿವೊಂದು ಮರದಿಂದ ಬಿದ್ದು ಸಾವನ್ನಪ್ಪಿದೆ. ಈ ವೇಳೆ ಕೆಲ ಕೋತಿಗಳು ಅಲ್ಲಿಗೆ ಬಂದು ಮರಿ ಸತ್ತಿರುವುದನ್ನ ನೋಡಿ, ಸ್ಥಳದಿಂದ ಹೊರಟುಹೋಗಿವೆ. ಆದರೆ ಮಗುವಿನ ಮೇಲಿನ ಪ್ರೀತಿಗೆ ಮಮ್ಮಲ ಮರುಗುತ್ತಿರುವ ತಾಯಿ ಕೋತಿ ಮಾತ್ರ ಅದರ ದೇಹದ ಮುಂದೆ ಹತ್ತಾರು ಗಂಟೆಗಳ ಕಾಲ ರೋಧಿಸಿ, ನಂತರ ಅದರ ದೇಹವನ್ನಿಟ್ಟುಕೊಂಡು ಅತ್ತಿಂದಿತ್ತ ದಿಕ್ಕು ತೋಚದಂತೆ ತಿರುಗಾಡುತ್ತಿದೆ.