ಅಹಮದಾಬಾದ್(ಗುಜರಾತ್):ಅನಾರೋಗ್ಯ ಪೀಡಿತ ಹೆಣ್ಣು ಮಗು ಜನಿಸಿದ್ದಕ್ಕೆ ಬೇಸತ್ತ ತಾಯಿ, 2 ತಿಂಗಳ ನವಜಾತ ಶಿಶುವನ್ನು ಆಸ್ಪತ್ರೆಯ ಮೂರನೇ ಮಹಡಿಯಿಂದ ಬಿಸಾಡಿ ಕೊಂದ ಆಘಾತಕಾರಿ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ. ಸಿಸಿಟಿವಿ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಕ್ರೂರಿ ತಾಯಿಯ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಅಹಮದಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. 2 ತಿಂಗಳ ಹಿಂದೆ ಮಹಿಳೆಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶು ಅನಾರೋಗ್ಯದಿಂದ ಬಳಲುತ್ತಿತ್ತು. ವೈದ್ಯರು ಚಿಕಿತ್ಸೆಗೆ ಸೂಚಿಸಿದ್ದರು. ಜನ್ಮತಾ ಮಗಳು ಅನಾರೋಗ್ಯಪೀಡಿತಳಾಗಿದ್ದು, ತಾಯಿಗೆ ಖೇದ ತಂದಿತ್ತು. ಇದರಿಂದ ತಾಯಿ ಬೆಳಗಿನ ಜಾವ 5 ಗಂಟೆಯ ವೇಳೆ ಮೂರನೇ ಮಹಡಿಯಿಂದ ಆಸ್ಪತ್ರೆಯ ಹಿಂದಿನ ಭಾಗದಲ್ಲಿ ಮಗುವನ್ನು ಬಿಸಾಡಿದ್ದಾರೆ.
ಮಗು ನಾಪತ್ತೆ ನಾಟಕ:ಕೆಲ ಸಮಯದ ಬಳಿಕ ಮಗು ಕಾಣಿಸುತ್ತಿಲ್ಲ ಎಂದು ತಾಯಿ ದೂರು ನೀಡಿದ್ದಾಳೆ. ಇದು ಆಸ್ಪತ್ರೆ ಸಿಬ್ಬಂದಿ ಮತ್ತು ಕುಟುಂಬಸ್ಥರಿಗೆ ತಲೆನೋವು ತಂದಿದೆ. ಇಡೀ ಆಸ್ಪತ್ರೆಯನ್ನು ಜಾಲಾಡಿದ್ದಾರೆ. ಮಗು ಕಾಣೆಯಾಗಿದ್ದು, ಆತಂಕ ಉಂಟು ಮಾಡಿತ್ತು. ಬಳಿಕ ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಬಯಲಾಗಿದೆ.
ಬೆಳಗಿನ ಜಾವದ ವೇಳೆ ಮಗುವಿನ ಸಮೇತ ಹೊರ ಹೋಗಿದ್ದ ಮಹಿಳೆ ವಾಪಸ್ ಬಂದಾಗ ಒಂಟಿಯಾಗಿ ಬಂದಿದ್ದಳು. ಇದರ ಅನುಸಾರ ವಿಚಾರಣೆ ನಡೆಸಿದಾಗ ತಾಯಿ ಹತ್ಯೆಯ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಆಸ್ಪತ್ರೆಯ ಹಿಂಭಾಗ ಪರಿಶೀಲನೆ ನಡೆಸಿದಾಗ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಮಗುವನ್ನು ಕೊಂದ ಮಹಿಳೆಯ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಓದಿ:ಕಾಲೇಜಿನಲ್ಲಿ ಎಂ ಟೆಕ್ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿ.. ಬೆಚ್ಚಿಬಿದ್ದ ಬೆಂಗಳೂರು