ವಿಜಯನಗರಂ(ಆಂಧ್ರಪ್ರದೇಶ):ಮಗಳನ್ನು ಹೀರೋಯಿನ್ ಮಾಡಬೇಕೆಂದುಕೊಂಡಿದ್ದ ತಾಯಿಯೋರ್ವಳು ಅಡ್ಡದಾರಿ ಹಿಡಿದಿದ್ದಾಳೆ. ತನ್ನ ಅಪ್ರಾಪ್ತ ವಯಸ್ಸಿನ ಪುತ್ರಿ ದೈಹಿಕವಾಗಿ ಬೇಗ ಬೆಳೆಯಲಿ ಎಂದು ಡ್ರಗ್ಸ್ ನೀಡಿ ಚಿತ್ರಹಿಂಸೆ ಕೊಟ್ಟಿರುವ ಘಟನೆ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ. ಚಲನಚಿತ್ರೋದ್ಯಮದ ಬಗ್ಗೆ ಗೀಳು ಹೊಂದಿದ್ದ ತಾಯಿಯು ತನ್ನ ಮಗಳನ್ನು ಚಿತ್ರ ನಟಿಯನ್ನಾಗಿ ಮಾಡಲು ಬಯಸಿದ್ದಳು. ಅಪ್ರಾಪ್ತೆ ಮಗಳು ಬೇಗ ದೈಹಿಕವಾಗಿ ಬೆಳವಣಿಗೆಯಾಗುವಂತೆ ಮಾಡಲು ಡ್ರಗ್ಸ್ ಇಂಜೆಕ್ಷನ್ ನೀಡಲು ಪ್ರಾರಂಭಿಸಿದ್ದಾಳೆ. ಈ ಹಿಂಸೆಯನ್ನು ಸಹಿಸಲಾರದೆ ಸಂತ್ರಸ್ತೆ ಚೈಲ್ಡ್ ಲೈನ್ ಇಲಾಖೆಗೆ ದೂರು ನೀಡಿದಾಗ ಈ ಕೃತ್ಯ ಬಯಲಿಗೆ ಬಂದಿದೆ.
ಏನಿದು ಘಟನೆ?: ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ವಿಜಯನಗರಂನ ಗ್ರಾಮವೊಂದರಲ್ಲಿ ವಿವಾಹಿತ ಮಹಿಳೆ (40) ವಾಸವಾಗಿದ್ದರು. ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ ಪತಿ ನಿಧನರಾಗಿದ್ದರು. ಹೀಗಾಗಿ ಮಹಿಳೆ ಬೇರೊಬ್ಬ ವ್ಯಕ್ತಿ ಜೊತೆಗೆ ಮತ್ತೊಂದು ಮದುವೆಯಾಗಿದ್ದಳು. ಎರಡನೇ ಪತಿಯಿಂದ ಮಹಿಳೆಗೆ ಇಬ್ಬರು ಮಕ್ಕಳು ಜನಿಸಿದ್ದರು. ಆದರೆ ಎರಡನೇ ಪತಿ, ಪತ್ನಿಯ ನಡವಳಿಕೆಯನ್ನು ಇಷ್ಟಪಡದೆ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಸದ್ಯ ಮಹಿಳೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಹಜೀವನವನ್ನು ನಡೆಸುತ್ತಿದ್ದಾಳೆ.
ಮಹಿಳೆಯ ಮೊದಲ ಗಂಡನ ಮಗಳು (15) ಇತ್ತೀಚೆಗೆ ವಿಶಾಖಪಟ್ಟಣಂನ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿ. ಬೇಸಿಗೆ ರಜೆಗೆಂದು ತನ್ನ ತಾಯಿಯ ಬಳಿಗೆ ಬಂದಿದ್ದಳು. ಆದರೆ ಆಗಾಗ ಮಹಿಳೆಯ ಮನೆಗೆ ಬರುತ್ತಿದ್ದ ವ್ಯಕ್ತಿಯೊಬ್ಬರು ಬಾಲಕಿಯನ್ನು ನೋಡಿ ಮಹಿಳೆಗೆ ನಿನ್ನ ಮಗಳಿಗೆ ಸಿನಿಮಾ ನಟಿಯಾಗುವ ಲಕ್ಷಣಗಳಿವೆ ಎಂದು ಹೇಳಿದ್ದರು. ಆದರೆ ಬಾಲಕಿ ಚಿಕ್ಕವಳಾಗಿರುವುದರಿಂದ ಅಂಗಾಂಗಗಳು ಬೇಗ ಬೆಳೆಯುವಂತೆ ಮಾಡಲು ಡ್ರಗ್ಸ್ ಇಂಜೆಕ್ಷನ್ ನೀಡಲು ಸಲಹೆ ನೀಡಿದ್ದರಂತೆ.