ಕೇರಳ:ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಪುರುಷರಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ವೇದಾಧ್ಯಯನ ಪುರುಷರಿಗಷ್ಟೇ ಸೀಮಿತವಾಗಿದೆ. ವೇದ, ಶಾಸ್ತ್ರ, ಸಂಸ್ಕೃತ, ದೇವಾಲಯಗಳಲ್ಲಿ ಪೂಜೆ, ಪೌರೋಹಿತ್ಯ ಪುರುಷರಿಗೆ ಮಾತ್ರ ಸೂಕ್ತ ಎಂಬ ನಂಬಿಕೆ ಇದೆ. ಇದೆಲ್ಲರ ನಡುವೆ, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣೂ ಸಹ ಪೌರೋಹಿತ್ಯ ಮಾಡಿ ಗೌರವ ಸಂಪಾದಿಸಹುದು ಎನ್ನುವುದನ್ನು ಕೇರಳದ ತಾಯಿ-ಮಗಳಿಬ್ಬರು ತೋರಿಸಿಕೊಟ್ಟಿದ್ದಾರೆ.
ಹೌದು, ಕೇರಳದಲ್ಲಿ ಪೌರೋಹಿತ್ಯ ಮತ್ತು ತಾಂತ್ರಿಕ ಆಚರಣೆಗಳಲ್ಲಿ ಶತಮಾನಗಳಿಂದಲೂ ಪುರುಷ ಪ್ರಾಬಲ್ಯವಿದೆ. ಆದ್ರೆ, ಈ ಪರದೆಯನ್ನು ಸರಿಸಿ ಮೌನವಾಗಿ ಇತಿಹಾಸ ಸೃಷ್ಟಿಸುತ್ತಿರುವ 24 ವರ್ಷದ ಜ್ಯೋತ್ಸ್ನಾ ಪದ್ಮನಾಭನ್ ಮತ್ತು ಆಕೆಯ ತಾಯಿ ಅರ್ಚನಾ ಕುಮಾರಿ (47) ಅವರ ಕುರಿತಾದ ಕಥೆ ಇಲ್ಲಿದೆ ನೋಡಿ.
ಬಾಲ್ಯದಿಂದಲೂ ತಂದೆಯೊಂದಿಗೆ ದೇವಸ್ಥಾನದಲ್ಲಿ ಪೂಜೆ ನಡೆಸಲು ಹಂಬಲಿಸುತ್ತಿದ್ದ ಅರ್ಚನಾ ಕುಮಾರಿ ಅವರು ಇದೀಗ ಮಗಳಿಗೂ ತಮ್ಮ ಕಲೆಯನ್ನು ಹೇಳಿ ಕೊಡುತ್ತಿದ್ದಾರೆ. ಈ ಇಬ್ಬರೂ ಮಹಿಳೆಯರು ಕೇರಳ ಜಿಲ್ಲೆಯ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಲವು ವೇಳೆ ನೆರೆಯ ದೇವಾಲಯಗಳಲ್ಲಿ ಮತ್ತು ಇತರೆ ಸ್ಥಳಗಳಲ್ಲಿ ತಾಂತ್ರಿಕ ಆಚರಣೆಗಳನ್ನು ಮಾಡುತ್ತಿದ್ದಾರೆ.
ಪುರಾತನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಇರಿಂಜಲಕುಡದ ಕಟ್ಟೂರಿನ ಥರನೆಲ್ಲೂರು ತೆಕ್ಕಿನಿಯೇದತ್ತು ಮನದ ಜ್ಯೋತ್ಸ್ನಾ ಮತ್ತು ಅರ್ಚನಾ ಅವರು ತಮ್ಮ ಶುದ್ಧ ಭಕ್ತಿಯಿಂದ ಮಾತ್ರ ಪುರೋಹಿತ ಜಗತ್ತಿಗೆ ಪ್ರವೇಶಿಸಿದ್ದು, ಸಮಾಜದಲ್ಲಿ ಯಾವುದೇ ಅಂಶವನ್ನು ಸಾಬೀತುಪಡಿಸಲು ಅಲ್ಲ. ಇದನ್ನು ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಲಿಂಗ ಸಮಾನತೆಯ ಸ್ಟೀರಿಯೊಟೈಪ್ಗಳನ್ನು ಮುರಿಯುವ ಯಾವುದೇ ಪ್ರಯತ್ನವೆಂದು ನಾವು ಕರೆಯಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.