ಪಲಾಮು(ಜಾರ್ಖಂಡ್): ಜಾರ್ಖಂಡ್ನ ಪಲಾಮುನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದು, 10 ವರ್ಷದ ಮಗ ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ತಾಯಿ ಮತ್ತು ಸಹೋದರನ ಶವಗಳನ್ನು ಹಾಸಿಗೆಯ ಮೇಲೆ ಇಟ್ಟುಕೊಂಡು ಅವರೊಂದಿಗೆ ಮಲಗಿದ್ದಾನೆ.
'ಅಮ್ಮ ಹೇಳಿದಳು..ಉಯ್ಯಾಲೆ ಆಡೋಣವೆಂದು..!': ಮೃತ ಮಹಿಳೆ ಶಾಂತಿ ಮನೆಯಲ್ಲಿ ದಿನನಿತ್ಯದ ಜಗಳದಿಂದ ಬೇಸತ್ತಿದ್ದಳು. ಗಂಡನ ಎರಡನೇ ಮದುವೆಯ ಬಗ್ಗೆ ತುಂಬಾ ಕೋಪಗೊಂಡಿದ್ದಳು. ಅಲ್ಲದೇ ಇತ್ತೀಚೆಗಷ್ಟೇ ಆಕೆಯ ಅತ್ತಿಗೆ ಮನೆಯಲ್ಲಿ ಕೆಲ ದಿನಗಳ ಕಾಲ ತಂಗಿದ್ದಳು. ಅವಳಿಗೆ ಗಂಡನ ವಿಷಯದಲ್ಲಿ ಮನಸ್ಸು ಬಹಳ ನೊಂದಿತ್ತು. ಶನಿವಾರ ರಾತ್ರಿ ತನ್ನಿಬ್ಬರು ಮಕ್ಕಳಿಗೆ ಚೆನ್ನಾಗಿ ಊಟ ಬಡಿಸಿ, ನಂತರ ಸೀರೆಯನ್ನು ಹಗ್ಗವಾಗಿ ಕಟ್ಟಿ ಉಯ್ಯಾಲೆ ಆಟ ಆಡೋಣವೆಂದು ಮಕ್ಕಳನ್ನು ಒಪ್ಪಿಸಿದಳು. ಹೀಗೆ ತನ್ನಿಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಲು ನೋಡಿದ್ದು, 10 ವರ್ಷದ ಮಗ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾನೆ.
ತಾಯಿ, ತಮ್ಮನ ಶವದೊಂದಿಗೆ ಮಲಗಿದ ಛೋಟು: ಗಂಡ ಹೆಂಡತಿಯ ಜಗಳ ಮಕ್ಕಳ ಭವಿಷ್ಯವನ್ನೇ ಬದಲಾಯಿಸಿತು. ಆತ್ಮಹತ್ಯೆಯಲ್ಲಿ ಮಹಿಳೆ ಸಾವನ್ನಪ್ಪಿದ್ದು ಜೊತೆಗೆ ಆಕೆಯ 8 ವರ್ಷದ ಮಗ ಕೂಡ ಮೃತಪಟ್ಟಿದ್ದಾನೆ. ತಾಯಿ ಮತ್ತು ತಮ್ಮನ ಮೃತ ದೇಹವನ್ನು ಎಚ್ಚರಿಕೆಯಿಂದ ಛೋಟು ಹಾಸಿಗೆಯ ಮೇಲೆ ಮಲಗಿಸಿದ್ದಾನೆ. ರಾತ್ರಿಯಿಡೀ ಅವರಿಬ್ಬರ ಪಕ್ಕದಲ್ಲೇ ಮಲಗಿ ದಿನ ಕಳೆದಿದ್ದಾನೆ. ಭಾನುವಾರ ಬೆಳಗ್ಗೆ ಛೋಟು ಇಡೀ ಘಟನೆಯನ್ನು ನೆರೆಹೊರೆಯವರಿಗೆ ವಿವರಿಸಿದ್ದಾನೆ.