ನವಾಡ (ಬಿಹಾರ): ಮಹಿಳೆಯೊಬ್ಬಳು ತನ್ನಿಬ್ಬರು ಹೆಣ್ಣು ಮಕ್ಕಳನ್ನು ಸಜೀವವಾಗಿ ಸುಟ್ಟು ಹಾಕಿ, ನಂತರ ತಾನೂ ಬೆಂಕಿ ಹಚ್ಚಿಕೊಂಡಿರುವ ಘಟನೆ ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದಿದೆ. ನೇಮ್‌ದರ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ದುದೈಲಿ ಗ್ರಾಮದಲ್ಲಿ ಮಹಿಳೆ ತನ್ನ ಅಮಾಯಕ ಹೆಣ್ಣು ಮಕ್ಕಳನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ. ಬಾಲಕಿಯರಲ್ಲಿ ಒಬ್ಬಳ ವಯಸ್ಸು 2 ವರ್ಷ ಹಾಗೂ ಇನ್ನೊಬ್ಬಳ ವಯಸ್ಸು 8 ವರ್ಷ ಎಂದು ತಿಳಿದು ಬಂದಿದೆ. ಮಕ್ಕಳಿಗೆ ಬೆಂಕಿ ಹಚ್ಚಿದ ಮಹಿಳೆಗೆ ಸುಟ್ಟ ಗಾಯಗಳಾಗಿದ್ದು ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಈ ರೀತಿಯ ನಿರ್ಧಾರಕ್ಕೆ ಕಾರಣ ಏನು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಘಟನೆ ಸಂಭವಿಸಿದ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ: ಈ ಘಟನೆ ಕುರಿತು ರಾಜೌಲಿ ಎಸ್‌ಡಿಪಿಒ ಪಂಕಜ್ ಕುಮಾರ್ ಮಾತನಾಡಿ, ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಮಾಹಿತಿ ಬಂದಿದ್ದು, ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಘಟನೆ ಬೇರೆಯೇ ಆಗಿತ್ತು. ಗ್ಯಾಸ್ ಸ್ಟೌವ್‌ನಿಂದ ಸಿಲಿಂಡರ್ ಬೇರ್ಪಡಿಸಿ ಕೊಠಡಿಯೊಂದರಲ್ಲಿ ಇಟ್ಟು, ಬೆಂಕಿ ಹಚ್ಚಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಿಂದ ಇಬ್ಬರು ಬಾಲಕಿಯರು ಸುಟ್ಟು ಕರಕಲಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಮೇಲ್ನೋಟಕ್ಕೆ ಮಹಿಳೆಯೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಸುಟ್ಟು ಕೊಂದಿದ್ದಾಳೆ ಎಂದು ತಿಳಿದು ಬಂದಿದೆ. ಮಹಿಳೆ ಯಾಕೆ ಇಂತಹ ನಿರ್ಧಾರ ಕೈಗೊಂಡಳು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಹೆಚ್ಚಿನ ಮಾಹಿತಿ ಬಹಿರಂಗಗೊಳ್ಳಲಿದೆ. ಸದ್ಯ ಪೊಲೀಸರು ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಡಿಪಿಒ ಹೇಳಿದರು.
ಇದನ್ನೂ ಓದಿ:ಬೆಂಕಿ, ಗುಂಡಿನ ದಾಳಿ, ಚಾಕು ಇರಿತ.. ಜೈಲಿನಲ್ಲಿ 26 ಮಹಿಳೆಯರು ಬೆಂಕಿಗಾಹುತಿ ಸೇರಿ 41 ಜನರ ಸಾವು!