ಹೋಶಿಯಾರ್‌ಪುರ (ಪಂಜಾಬ್):ಮಹಿಳೆಯೊಬ್ಬರು ತಾನೇ ಹೆತ್ತ 8 ವರ್ಷದ ಮಗನನ್ನು ಕಾಲುವೆಗೆ ಎಸೆದು ಕೊಲೆ ಮಾಡಿರುವ ಘಟನೆ ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.
ರೀನಾ ಕುಮಾರಿ ಎಂಬಾಕೆಯೇ ಮಗನನ್ನು ಕೊಂದ ತಾಯಿ. 2012ರಲ್ಲಿ ರವಿಕುಮಾರ್ ಎಂಬುವರನ್ನು ರೀನಾ ಮದುವೆಯಾಗಿದ್ದರು. ದಂಪತಿಗೆ ಹತ್ತು ವರ್ಷದ ಮಗಳು ಮತ್ತು ಎಂಟು ವರ್ಷದ ಮಗನಿದ್ದ. ಪತಿ ರವಿಕುಮಾರ್ ಜೀವನೋಪಾಯಕ್ಕಾಗಿ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. ದೂರದಲ್ಲಿದ್ದ ಪತಿಯೊಂದಿಗೆ ರೀನಾ ಹಣದ ವಿಚಾರವಾಗಿ ಆಗಾಗ್ಗೆ ಫೋನ್‌ನಲ್ಲಿ ಜಗಳವಾಡಿ, ಹಣ ಕೊಡದಿದ್ದರೆ ಮಕ್ಕಳನ್ನು ಕಾಲುವೆಗೆ ಎಸೆಯುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಪೊಲೀಸ್ ಅಧಿಕಾರಿ ಬಿಕ್ರಮಜಿತ್ ಸಿಂಗ್ ತಿಳಿಸಿದ್ದಾರೆ.
ಇದೇ ಡಿಸೆಂಬರ್ 25ರ ರಾತ್ರಿ ಕೂಡ ಹಣದ ವಿಚಾರವಾಗಿ ರೀನಾ ತನ್ನ ಪತಿಯೊಂದಿಗೆ ಫೋನ್‌ನಲ್ಲಿ ಜಗಳವಾಡಿದ್ದಳು. ಇದಾದ ನಂತರ ನಿನ್ನೆ (ಡಿ.28)ರಂದು ರೀನಾ ತನ್ನ ಮಗನನ್ನು ಕರೆದುಕೊಂಡು ಕಾಲುವೆ ಸಮೀಪ ಹೋಗುವುದನ್ನು ಆಕೆಯ ಸೋದರ ಮಾವ ಗಮನಿಸಿದ್ದಾನೆ. ನಂತರ ಅವರಿಬ್ಬರನ್ನೂ ಹುಡುಕಿಕೊಂಡು ಆತ ಹೋಗಿದ್ದಾನೆ. ಈ ವೇಳೆ ಕಾಲುವೆಯ ದಡದಲ್ಲಿ ತಾಯಿ ಮತ್ತು ಮಗ ಕುಳಿತಿದ್ದಾರೆ ಎಂದು ದಾರಿಹೋಕರು ಸಹ ಮಾಹಿತಿ ನೀಡಿದ್ದಾರೆ. ಅಂತೆಯೇ, ಸೋದರ ಮಾವ ಸಮೀಪ ಹೋಗುತ್ತಿದ್ದಂತೆಯೇ ರೀನಾ ತನ್ನ ಮಗನನ್ನು ಕಾಲುವೆಗೆ ತಳ್ಳಿ ಪರಾರಿಯಾಗಿದ್ದಳು ಎಂದು ಅವರು ವಿವರಿಸಿದ್ದಾರೆ.
ತುಂಬಿ ಹರಿಯುತ್ತಿದ್ದ ಕಾಲುವೆಗೆ ಬಾಲಕನನ್ನು ತಳ್ಳಿದ್ದರಿಂದ ಆತ ನೀರು ಕೊಚ್ಚಿಕೊಂಡು ಹೋಗಿದ್ದಾನೆ. ಸದ್ಯ ಆರೋಪಿ ತಾಯಿ ಸಿಕ್ಕಿಬಿದ್ದಿದ್ದು, ಬಾಲಕನ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ:ಹೊಸ ವರ್ಷದ ಆಚರಣೆ ಹೊಸ್ತಿಲಲ್ಲಿ ಉಗ್ರರ ದಾಳಿ ಭೀತಿ: ಪಂಜಾಬ್ನಲ್ಲಿ ಹೈಅಲರ್ಟ್