ಜಲಂಧರ್ (ಪಂಜಾಬ್): ಪತ್ತಾರ ಪೊಲೀಸ್ ಠಾಣಾ ವ್ಯಾಪ್ತಿಯ ಭುಜೇವಾಲ್ ಗ್ರಾಮದ ಸಮೀಪದ ಅಮರ್ ನಗರದಲ್ಲಿ ತಾಯಿ ಮಗಳ ಜೋಡಿ ಕೊಲೆ ನಡೆದಿದೆ. ಬೈಕ್‌ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಮೃತರನ್ನು ಅಮರ್ ನಗರ ನಿವಾಸಿ ರಂಜಿತ್ ಕೌರ್ ಮತ್ತು ಪುತ್ರಿ ಪ್ರೀತಿ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಪ್ರೀತಿಯ ಮಗು ಶಾಲೆಯಲ್ಲಿ ಇದ್ದುದರಿಂದ ಬದುಕುಳಿದಿದೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಸಾವಿಗೀಡಾಗಿದ್ದ ರಂಜಿತ್ ಕೌರ್ ಮೃತದೇಹವನ್ನು ಪೆಟ್ರೋಲ್ ಸುರಿದು ಸುಡಲು ಯತ್ನಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್‌ಎಸ್‌ಪಿ ಮುಖವಿಂದರ್ ಸಿಂಗ್ ಭುಲ್ಲಾರ್ ಮತ್ತು ಎಸ್‌ಪಿ ಮನ್‌ಪ್ರೀತ್ ಸಿಂಗ್ ಧಿಲ್ಲೋನ್ ಪೊಲೀಸ್ ತಂಡದೊಂದಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.
ಕುಟುಂಬದವರ ಹೇಳಿಕೆ ಪ್ರಕಾರ, ವಿದೇಶದಲ್ಲಿರುವ ಪ್ರೀತಿಯ ಗಂಡನ ಮೇಲೆ ಶಂಕೆ ವ್ಯಕ್ತವಾಗಿದೆ. ರಂಜಿತ್ ಕೌರ್ ಅವರ ಪತಿ ಹೇಳಿಕೆ ನೀಡಿದ್ದು, ಇಂದು ಬೆಳಿಗ್ಗೆ ಸಂಬಂಧಿಯ ಮನೆಗೆ ಹೋಗಿದ್ದಾಗ ಹಿಂದಿನಿಂದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತರು ಪತ್ನಿ ಮತ್ತು ಮಗಳಿಗೆ ಗುಂಡು ಹಾರಿಸಿದ್ದಾರೆ. ಪತ್ನಿಯ ದೇಹಕ್ಕೂ ಬೆಂಕಿ ಹಚ್ಚಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅಳಿಯನೇ ಕೊಲೆ ಮಾಡಿಸಿರುವುದಾಗಿ ಆರೋಪಿಸಿದ್ದಾರೆ.
4 ವರ್ಷಗಳ ಹಿಂದೆ ತಮ್ಮ ಮಗಳ ಮದುವೆಯಾಗಿತ್ತು. ಆದರೆ ಮಗಳು ಮತ್ತು ಅಳಿಯ ಆಗಾಗ್ಗೆ ಜಗಳವಾಡುತ್ತಿದ್ದು, ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ನಾವು ಪತ್ತಾರ ಪೊಲೀಸ್ ಠಾಣೆಗೆ ಹಲವು ದೂರುಗಳನ್ನು ನೀಡಿದ್ದೆವು. ಆದರೆ ಅವರು ಯಾವುದೇ ಕ್ರಮ ಕೈಗೊಳ್ಳದೇ ಇದ್ದುದರಿಂದ ಇಂದು ದುಷ್ಕರ್ಮಿಗಳು ಮನೆಗೆ ಬಂದು ಹತ್ಯೆ ಮಾಡಿದ್ದಾರೆ ಎಂದು ಹೇಳಿದರು.
ಸಿಸಿಟಿವಿಯಲ್ಲಿ ಆರೋಪಿಗಳು ಸೆರೆ: ಜೋಡಿ ಕೊಲೆ ಮಾಡಿದ ಇಬ್ಬರು ದುಷ್ಕರ್ಮಿಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಇಬ್ಬರೂ ಸ್ಪ್ಲೆಂಡರ್ ಬೈಕ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಸಿಸಿಟಿವಿಗಳನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಗಳನ್ನು ಗುರುತಿಸಲಾಗಿದ್ದು, ಒಬ್ಬ ಪೇಟಧಾರಿ ಯುವಕನಾಗಿದ್ದು ಶೀಘ್ರದಲ್ಲೇ ಹಂತಕನನ್ನು ಹಿಡಿಯುತ್ತೇವೆ ಎಂದು ಡಿಎಸ್ಪಿ ತಿಳಿಸಿದ್ದಾರೆ. ಅಳಿಯನ ಮೇಲೆ ಕುಟುಂಬದವರು ಶಂಕೆ ವ್ಯಕ್ತಪಡಿಸಿರುವುದರಿಂದ ಆ ಆಯಾಮದಲ್ಲೇ ನಾವು ತನಿಖೆ ಆರಂಭಿಸಿದ್ದೆವು. ಆದರೆ ಈ ಪ್ರಕರಣದಲ್ಲಿ ಸ್ವಲ್ಪ ಗೊಂದಲವಿದೆ. ಘಟನೆಯ ನಂತರ ಆರೋಪಿಗಳಿಬ್ಬರೂ ಗ್ರಾಮ ತೊರೆದು ಪತ್ತಾರ ತಲುಪಿ ಅಲ್ಲಿಂದ ಹೆದ್ದಾರಿ ಮೂಲಕ ಪರಾರಿಯಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದರು.
ಇದನ್ನೂ ಓದಿ:20 ವರ್ಷಗಳ ಹಿಂದೆ 'ಮೃತಪಟ್ಟಿದ್ದ' ನೌಕಾಪಡೆ ಮಾಜಿ ಸಿಬ್ಬಂದಿ ದೆಹಲಿಯಲ್ಲಿ ಪತ್ತೆ, ತ್ರಿವಳಿ ಕೊಲೆ ಕೇಸಲ್ಲಿ ಬಂಧನ