ಮಾನಸಾ(ಪಂಜಾಬ್):ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿದ್ದರೂ ಸಿಬ್ಬಂದಿ ವಿಡಿಯೋ ಕಾಲ್ ಮಾಡಿ ವೈದ್ಯರ ಸಲಹೆಯ ಆಧಾರದ ಮೇಲೆ ಮಹಿಳೆಗೆ ಹೆರಿಗೆ ಮಾಡಿಸಲಾಗಿದೆ. ಈ ವೇಳೆ ಏನೋ ಹೆಚ್ಚು ಕಮ್ಮಿ ಆಗಿ ಮಗು ಸಹಿತ ತಾಯಿ ಮೃತಪಟ್ಟ ಘಟನೆ ಪಂಜಾಬ್ನಲ್ಲಿ ನಡೆದಿದೆ. ಇದನ್ನು ಖಂಡಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.
ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆತರಲಾಗಿದೆ. ಈ ವೇಳೆ ಪ್ರಸೂತಿ ವೈದ್ಯರು ಇರಲಿಲ್ಲ. ಮಹಿಳೆಗೆ ನೋವು ಹೆಚ್ಚಾದ ಕಾರಣ ಅಲ್ಲಿನ ಸಿಬ್ಬಂದಿ ವೈದ್ಯರಿಗೆ ಕಾಲ್ ಮಾಡಿ ತಿಳಿಸಿದ್ದಾರೆ. ವೈದ್ಯರು ವಿಡಿಯೋ ಕಾಲ್ ಮೂಲಕ ಸಲಹೆ ನೀಡುವುದಾಗಿ ತಿಳಿಸಿ, ಅದರಂತೆ ಗರ್ಭಿಣಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆಯಂತೆ.
ಕೆಲ ಸಮಯದ ಬಳಿಕ ನವಜಾತ ಶಿಶು ಮತ್ತು ತಾಯಿ ಇಬ್ಬರೂ ಉಸಿರು ಚೆಲ್ಲಿದ್ದಾರೆ. ಸಿಬ್ಬಂದಿಯ ಅಚಾತುರ್ಯದಿಂದಾಗಿ ಇಬ್ಬರ ಪ್ರಾಣ ಹಾರಿಹೋಗಿದೆ. ಈ ವಿಷಯ ಗೊತ್ತಾಗಿ ಮಹಿಳೆಯ ಕುಟುಂಬಸ್ಥರು ಆಸ್ಪತ್ರೆಯ ವಿರುದ್ಧ ಕೆಂಡಕಾರಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.