ದಂತೇವಾಡ (ಛತ್ತೀಸಗಢ): 19 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ, ಮೋಸ್ಟ್ ವಾಂಟೆಡ್ ನಕ್ಸಲ್ವೋರ್ವನನ್ನು ದಂತೇವಾಡದಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಕಾಟೆಕಲ್ಯಾಣ ಪೊಲೀಸ್ ಠಾಣೆ ವ್ಯಾಪ್ತಿಯ ಜಬ್ರಾಮೆಟ್ಟಾ ಅರಣ್ಯದಲ್ಲಿ ಜಿಲ್ಲಾ ರಿಸರ್ವ್ ಗಾರ್ಡ್ (District Reserve Guard -DRG) ಪೊಲೀಸರೊಂದಿಗೆ ಸೋಮವಾರ ಮಧ್ಯರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಈ ನಕ್ಸಲ್ ಹತನಾಗಿದ್ದಾನೆ.
ಭದ್ರತಾ ಪಡೆಯ ಕಾರ್ಯಾಚರಣೆ.. ಮೋಸ್ಟ್ ವಾಂಟೆಡ್ ನಕ್ಸಲ್ ಎನ್ಕೌಂಟರ್ನಲ್ಲಿ ಹತ - etv bharat kannada
ದಂತೇವಾಡ ಜಿಲ್ಲೆಯಲ್ಲಿ ಎನ್ಕೌಂಟರ್- ಮೋಸ್ಟ್ ವಾಂಟೆಡ್ ನಕ್ಸಲ್ ಹತ- ಗುಂಡಿನ ಚಕಮಕಿಯಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಯ ಯೋಧರು
ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆಗಳನ್ನು ಗುರಿಯಾಗಿಸಿ ನಕ್ಸಲರು ದಾಳಿ ಮಾಡಿದಾಗ, ಡಿಆರ್ಜಿ ಯೋಧರು ಪ್ರತಿದಾಳಿ ನಡೆಸಿದರು. ಆದರೆ, ಕತ್ತಲೆ ಇದ್ದುದರಿಂದ ಕೆಲ ನಕ್ಸಲರು ಪರಾರಿಯಾಗುವಲ್ಲಿ ಸಫಲರಾಗಿದ್ದಾರೆ. ನಂತರ ಗುಂಡಿನ ಚಕಮಕಿ ನಡೆದ ಸ್ಥಳದಲ್ಲಿ ನಕ್ಸಲ್ ಓರ್ವನ ಮೃತದೇಹ ದೊರೆತಿದೆ. ಮೃತನನ್ನು ಬುಧರಾಮ್ ಮಾರ್ಕಮ್ ಎಂದು ಗುರುತಿಸಲಾಗಿದ್ದು, ಈತ ನಿಷೇಧಿತ ನಕ್ಸಲ್ ಸಂಘಟನೆಯ ಕಾಟೆಕಲ್ಯಾಣ ಪ್ರದೇಶದ ಸದಸ್ಯ ಎಂದು ತಿಳಿದು ಬಂದಿದೆ.
ಎಲ್ಲಾ ಭದ್ರತಾ ಸಿಬ್ಬಂದಿ ಸುರಕ್ಷಿತವಾಗಿದ್ದು, ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಹೇಳಿದ್ದಾರೆ.