ನವದೆಹಲಿ:ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಹಾಗೂ ಸಕ್ರಿಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಬಹುತೇಕ ಎಲ್ಲಾ ಪ್ರಕರಣಗಳು ಸೌಮ್ಯ ಸ್ವಭಾವದಿಂದ ಕೂಡಿದೆ. ಹೀಗಾಗಿ ಭಯಪಡುವ ಅಗತ್ಯ ಇಲ್ಲ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಅಂಕಿಅಂಶಗಳನ್ನು ನೀಡಿದ ಅವರು, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಆಸ್ಪತ್ರೆಗೆ ದಾಖಲಾಗಿ ಬೆಡ್ ಹಿಡಿಯುತ್ತಿರುವ ಪ್ರಮಾಣ ಶೇ.1ಕ್ಕಿಂತ ಕಡಿಮೆ ಇದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಬಂದಿದ್ದ 2ನೇ ಅಲೆಗೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ಇದೆ ಎಂದರು.
2021ರ ಡಿಸೆಂಬರ್ 29 ರಂದು 2 ಸಾವಿರ ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಜನವರಿ 1ರ ವೇಳೆಗೆ 6 ಸಾವಿರಕ್ಕೆ ಏರಿಕೆಯಾಗಿದೆ. ಆದರೆ ಈ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ಕಡಿಮೆ ಇದೆ. 2021ರ ಡಿ.29 ರಂದು 262 ಮಂದಿ ಆಸ್ಪತ್ರೆಯ ಬೆಡ್‌ಗಳಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ 2022ರ ಜ.1 ರಂದು ಕೇವಲ 247 ಮಂದಿ ಮಾತ್ರ ದಾಖಲಾಗಿದ್ದಾರೆ ಎಂದು ಕೇಜ್ರಿವಾಲ್ ವಿವರಿಸಿದರು.
ಕಳೆದ ವರ್ಷದ ಮಾರ್ಚ್ 27 ರಂದು ದೆಹಲಿಯಲ್ಲಿ 6,600 ಸಕ್ರಿಯ ಪ್ರಕರಣಗಳಿದ್ದರೆ, 1,150 ಆಕ್ಸಿಜನ್ ಬೆಡ್‌ಗಳನ್ನು ಬಳಸಿದ್ದರು. 145 ರೋಗಿಗಳು ವೆಂಟಿಲೇಟರ್‌ನಲ್ಲಿದ್ದರು. ಈಗ ಕೇವಲ ಐದು ಮಂದಿ ಇದ್ದಾರೆ. ಪ್ರಸ್ತುತ ದೆಹಲಿಯಲ್ಲಿ 6,360 ಆ್ಯಕ್ಟಿವ್ ಪ್ರಕರಣಗಳು ಇದ್ದು, ಇಂದು 3,100 ಹೊಸ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಬಹುತೇಕ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದರು.
ಇದನ್ನೂ ಓದಿ:ದೇಶಾದ್ಯಂತ ಕೊರೊನಾ ಆತಂಕ: ಕಳೆದ 24 ತಾಸಲ್ಲಿ 27 ಸಾವಿರ ಹೊಸ ಸೋಂಕಿತರು ಪತ್ತೆ