ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರದ ಕುರಿತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ(MoS) ಅಜಯ್ ಮಿಶ್ರಾ, ಪುತ್ರ ಆಶೀಶ್ ಮಿಶ್ರಾ ಸೇರಿದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರತಿಕ್ರಿಯೆ ನೀಡಿದ್ದಾರೆ.
'ಕೆಲವು ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಗಿತ್ತು. ಘಟನೆ ನಡೆದ ವೇಳೆ ನನ್ನ ಪುತ್ರ ಆಶೀಶ್ ಮಿಶ್ರಾ ಅಲ್ಲಿ ಇರಲಿಲ್ಲ. ಪ್ರತಿಭಟನಾಕಾರರ ಗುಂಪಿನಲ್ಲಿ ಕೆಲವು ಸಮಾಜಘಾತುಕ ಶಕ್ತಿಗಳು ಶಾಮೀಲಾಗಿದ್ದರು. ಅವರು ಬಿಜೆಪಿ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಉರುಳಿಸಿದರು. ಈ ಕುರಿತಾದ ವಿಡಿಯೋಗಳು ನಮ್ಮಲ್ಲಿವೆ. ಈ ಕೃತ್ಯ ಪೂರ್ವನಿಯೋಜಿತವಾಗಿದೆ. ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಕೆಲವರು ಗುಂಪಿನಲ್ಲಿ ಸೇರಿಕೊಂಡಿದ್ದರು' ಎಂದು ಅಜಯ್ ಮಿಶ್ರಾ ಆರೋಪಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಚಿವರ ಪುತ್ರ ಆಶೀಶ್ ಮಿಶ್ರಾ, 'ನಾನು ಬೆಳಗ್ಗೆ 9 ಗಂಟೆಯಿಂದ, ಘಟನೆ ನಡೆದ ಬಳಿಕವೂ ಬನ್ಬೀರ್‌ಪುರದಲ್ಲಿದ್ದೆ. ಕಳೆದ 2 ದಿನಗಳಿಂದ ಆ ಸ್ಥಳಕ್ಕೆ ಹೋಗಿರಲಿಲ್ಲ. ಕೆಲವರು ತಮ್ಮ ರಾಜಕೀಯ ಉದ್ದೇಶದಿಂದ ನನ್ನ ಹೆಸರು ಬಳಸುತ್ತಿರಬಹುದು' ಎಂದು ಆರೋಪಿಸಿದರು.
ಜಿಲ್ಲಾ ಮ್ಯಾಜಿಸ್ಟ್ರೇಟ್ ಅರವಿಂದ ಕುಮಾರ್ ಚೌರಾಸಿಯಾ ಮಾತನಾಡಿ, 'ಲಖಿಂಪುರ ಖೇರಿ ಘಟನೆಯಲ್ಲಿ ನಾಲ್ವರು ರೈತರು ಮತ್ತು ಇತರೆ ನಾಲ್ವರು ಸೇರಿದಂತೆ ಒಟ್ಟು 8 ಜನ ಸಾವನ್ನಪ್ಪಿದ್ದಾರೆ. ಇಂತಹ ವಿಚಾರದಲ್ಲಿ ರಾಜಕೀಯ ಮಾಡಬಾರದು. ಘಟನೆ ಕುರಿತು ಸೂಕ್ತ ತನಿಖೆ ನಡೆಸುವಂತೆ ಮತ್ತು ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಈಗಾಗಲೇ ರೈತರು ಮನವಿ ಸಲ್ಲಿಸಿದ್ದಾರೆ. ರೈತರು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಜೊತೆಗೆ ಮೃತರ ಕುಟುಂಬಕ್ಕೆ ಪರಿಹಾರ ಧನ ಮತ್ತು ಸರ್ಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದ್ದಾರೆ' ಎಂದರು.