ಗುವಾಹಟಿ (ಅಸ್ಸೋಂ): ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮತ್ತು ನೆಡಾ (NEDA) ಕನ್ವೀನರ್ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಅಸ್ಸೋಂನ ಶೇಕಡಾ 56ಕ್ಕೂ ಹೆಚ್ಚು ಶಾಸಕರು 1 ಕೋಟಿ ರೂ.ಗಳಷ್ಟು ಆಸ್ತಿಯನ್ನು ಹೊಂದಿದ್ದಾರೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಅಸ್ಸೋಂ ಎಲೆಕ್ಷನ್ ವಾಚ್ (ಎಇಡಬ್ಲ್ಯೂ) 126 ಶಾಸಕರಲ್ಲಿ 119 ಶಾಸಕರ ಆಸ್ತಿ ವಿವರಗಳನ್ನು ವಿಶ್ಲೇಷಿಸಿದ್ದು, 67 ಶಾಸಕರು ಕೋಟ್ಯಾಧಿಪತಿಗಳೆಂದು ತಿಳಿದು ಬಂದಿದೆ. ಅಸ್ಸೋಂ ಗಣ ಪರಿಷತ್ (ಎಜಿಪಿ) ಶಾಸಕ ನರೇನ್ ಸೋನೊವಾಲ್ ಅವರು ಸದನದ ಅತ್ಯಂತ ಶ್ರೀಮಂತ ಸದಸ್ಯರಾಗಿದ್ದು, ಸುಮಾರು 34 ಕೋಟಿ ರೂ.ಗಳಷ್ಟು ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಎಐಯುಡಿಎಫ್‌ನ ಸಹಾಬ್ ಉದ್ದೀನ್ ಅಹ್ಮದ್ ಅತ್ಯಂತ ಬಡ ಶಾಸಕರಾಗಿದ್ದು, ಅವರು 1.82 ಲಕ್ಷ ರೂ.ಗಳಷ್ಟು ಆಸ್ತಿ ಹೊಂದಿದ್ದಾರೆ ಎಂದು ವರದಿ ಹೇಳಿದೆ. ಇತರ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಬಿಜೆಪಿಯ ನಾರಾಯಣ್ ದೇಕಾ (17.23 ಕೋಟಿ ರೂ.) ಮತ್ತು ಎಐಯುಡಿಎಫ್‌ನ ಅಬ್ದುರ್ ರಹೀಂ ಅಜ್ಮಲ್ (13.11 ಕೋಟಿ ರೂ.) ಇದ್ದು, ಬಡ ಶಾಸಕರ ಪಟ್ಟಿಯಲ್ಲಿ ಎಐಯುಡಿಎಫ್‌ನ ಮಾಮುನ್ ಇಮದುದುಲ್ ಹಕ್ ಚೌಧರಿ (6.35 ಲಕ್ಷ ರೂ.) ಮತ್ತು ಬಿಜೆಪಿಯ ತರಾಶ್ ಗೌವಾಲ್ಲಾ (ರೂ. 8.9 ಲಕ್ಷ) ಇದ್ದಾರೆ.