ನವದೆಹಲಿ: ದೇಶದಲ್ಲಿ ಶೇ.50ರಷ್ಟು 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ನ ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಟ್ವೀಟ್ ಮಾಡಿದೆ.
ಜನವರಿ 3ರಿಂದ ದೇಶದಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲು ಶುರು ಮಾಡಿದ್ದು, ಕೇವಲ 15 ದಿನದಲ್ಲಿ ದೇಶದ ಅರ್ಧದಷ್ಟು ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗಿದೆ.
ಆರೋಗ್ಯ ಸಚಿವರ ಟ್ವೀಟ್:
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದು, 15ರಿಂದ 18 ವರ್ಷದೊಳಗಿನ ಶೇ. 50ರಷ್ಟು ಮಕ್ಕಳಿಗೆ ಮೊದಲ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಇದು ಅತಿದೊಡ್ಡ ಸಾಧನೆಯಾಗಿದ್ದು, ವ್ಯಾಕ್ಸಿನ್ ಪಡೆದುಕೊಂಡಿರುವ ಎಲ್ಲ ಮಕ್ಕಳಿಗೂ ಅಭಿನಂದನೆಗಳು. ತರುಣರು ಲಸಿಕೆ ಪಡೆದುಕೊಳ್ಳಲು ತೋರಿರುವ ಉತ್ಸಾಹ ಎಲ್ಲರಿಗೂ ಸ್ಫೂರ್ತಿಯಾಗಲಿದೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಈಗಾಗಲೇ 160 ಕೋಟಿಗೂ ಅಧಿಕ ಕೋವಿಡ್ ಡೋಸ್ ನೀಡಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಂದಿನ ಕೆಲ ತಿಂಗಳಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಕೋವಿಡ್ ವ್ಯಾಕ್ಸಿನ್ ನೀಡಲು ತಯಾರಿ ನಡೆಸಲಾಗಿದೆ.