ಕೊಲ್ಲಂ(ಕೇರಳ):ಸಾವಿರಕ್ಕೂ ಅಧಿಕ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕೇರಳದ ಕುಖ್ಯಾತ ಕಳ್ಳ ತಿರುಪರ್ವೆ ಅಜಿ(48) ಇದೀಗ ಮತ್ತೊಮ್ಮೆ ಪೊಲೀಸರ ಬಂಧಿಯಾಗಿದ್ದಾನೆ. ಕಳೆದ ತಿಂಗಳು ಕೇರಳದ ಕೊಲ್ಲಂನ ವಿದ್ಯಾರ್ಥಿನಿಯರ ಹೈಸ್ಕೂಲ್ನಲ್ಲಿ ಕಳ್ಳತನ ಮಾಡಿದ್ದಕ್ಕಾಗಿ ಆತನ ಬಂಧನ ಮಾಡಲಾಗಿದೆ.
ಬಂಧಿತ ಆರೋಪಿಯನ್ನ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕಳ್ಳತನದ ಸ್ಟೋರಿ ಬಹಿರಂಗಗೊಂಡಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸಾವಿರಕ್ಕೂ ಹೆಚ್ಚಿನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಬಿಚ್ಚಿಟ್ಟಿದ್ದಾನೆ. ಇದರಿಂದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
48 ವರ್ಷಗಳಲ್ಲಿ ಸಾವಿರಾರು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಈತ ಈಗಾಗಲೇ 28 ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದಾನೆ. ಕಳೆದ ನಾಲ್ಕು ವರ್ಷಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದು, ಈ ವೇಳೆ ಕೂಡ 100ಕ್ಕೂ ಅಧಿಕ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಇದನ್ನೂ ಓದಿರಿ:ಅಭಿಮಾನಿಗಳತ್ತ ನಿಂಬೆ ಹಣ್ಣು ಉರುಳಿಸಿದ ಮಾಜಿ ಸಚಿವ ಹೆಚ್ಡಿ ರೇವಣ್ಣ!
ಕಳ್ಳತನಕ್ಕಾಗಿ ವಿಶೇಷ ವಿಧಾನ ರೂಪಿಸಿಕೊಂಡಿರುವ ತಿರುಪರ್ವೆ ಅಜಿ ಪ್ರಮುಖವಾಗಿ ಅಂಗಡಿ, ಶಾಲೆಗಳಲ್ಲಿ ಕಳ್ಳತನ ಮಾಡುತ್ತಿದ್ದನು. ಎರ್ನಾಕುಲಂ,ಕೊಲ್ಲಂ, ಅಲಪ್ಪುಳ, ಕೊಟ್ಟಾಯಂ ಮತ್ತು ಪತ್ತಿನಂತಿಟ್ಟ ಜಿಲ್ಲೆಗಳಲ್ಲಿ ದರೋಡೆ ನಡೆಸಿದ್ದಾನೆ. ಕಳೆದ ತಿಂಗಳು ಕೊಲ್ಲಂ ಬಾಲಕಿಯರ ಪ್ರೌಢಶಾಲೆಯಲ್ಲಿ ಕಳ್ಳತನ ಮಾಡಿದ್ದನು. ಶಾಲೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾ ಧ್ವಂಸ ಮಾಡಿದ್ದನು. ಆದರೆ, ಈ ಕ್ಯಾಮರಾದಲ್ಲಿ ಆತನ ದೃಶ್ಯಾವಳಿ ಸೆರೆಯಾಗಿದ್ದವು. ಅದರ ಆಧಾರದ ಮೇಲೆ ಪೊಲೀಸರು ಈತನ ಬಂಧನ ಮಾಡಿದ್ದಾರೆ.