ನವದೆಹಲಿ: ಆನಂದಪುರದಲ್ಲಿ ಒಬ್ಬರು ಮತ್ತು ಬಾಲೆಸೋರ್ನಲ್ಲಿ ಓರ್ವ ಸೇರಿ ಒಡಿಶಾದಲ್ಲಿ ಯಾಸ್ ಚಂಡಮಾರತಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಆನಂದಪುರದಲ್ಲಿ ಮೃತಪಟ್ಟವರನ್ನು ಕೇಂದೂಜಾರ್ ಜಿಲ್ಲೆಯ ಪಂಚಪಲ್ಲ ಗ್ರಾಮದ ಪೂರ್ಣಚಂದ್ರ ನಾಯಕ್ ಎಂದು ಗುರುತಿಸಲಾಗಿದೆ. ಅವರು ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಜೋರಾಗಿ ಬೀಸಿದ ಗಾಳಿಯಿಂದಾಗಿ ಮಾರ್ಗ ಮಧ್ಯೆ ದೊಡ್ಡ ಮರದ ಕೊಂಬೆ ತಲೆಯ ಮೇಲೆ ಬಿದ್ದಿದೆ. ಪರಿಣಾಮ ಅವರು ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಬಾಲಸೋರ್ ನಗರದಲ್ಲಿಯೂ ಮರ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತರನ್ನು ಭಾಸ್ಕರ್‌ನ ಗಂಜ್ ಪ್ರದೇಶದ ಮಾಂಟು ಜೆನಾ ಎಂದು ಗುರುತಿಸಲಾಗಿದೆ.
ಬಂಗಾಳದಲ್ಲಿ ವಿಮಾನ, ರೈಲು ಕಾರ್ಯಾಚರಣೆ ಸ್ಥಗಿತ:
ಕೋಲ್ಕತ್ತಾದ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಇಂದು ಸಂಜೆ 7.45ರವರೆಗೆ ಸ್ಥಗಿತಗೊಳಿಸಲಾಗಿದೆ. ಯಾಸ್ ಚಂಡಮಾರುತದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಹೌರಾ ಮತ್ತು ಸೀಲ್ಡಾ ಟರ್ಮಿನಲ್ ನಿಲ್ದಾಣಗಳಿಂದ 129ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಸಹ ರದ್ದುಪಡಿಸಲಾಗಿದೆ.
ಇದನ್ನೂ ಓದಿ:ಒಡಿಶಾದ ಬಾಲಸೋರ್ನಲ್ಲಿ ‘ಯಾಸ್’ ಚಂಡಮಾರುತದ ಭೂಸ್ಪರ್ಶ ಪ್ರಕ್ರಿಯೆ ಪ್ರಾರಂಭ
ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಸಿಎಸ್‌ಎಂಐಎ) ಮುಂಬೈನಿಂದ ಭುವನೇಶ್ವರ ಮತ್ತು ಕೋಲ್ಕತ್ತಾದ ನಡುವಿನ ವಿಮಾನಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಅಂದಾಜು 6 ವಿಮಾನಗಳನ್ನು ಇಲ್ಲಿಯವರೆಗೆ ರದ್ದುಪಡಿಸಲಾಗಿದೆ. ಇತರ ಪ್ರದೇಶಗಳಿಗೆ ವಿಮಾನಗಳು ನಿಗದಿತ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮುಂಬೈ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.