ಅಮೃತಸರ (ಪಂಜಾಬ್) : ಪಾಕಿಸ್ತಾನದ ಡ್ರೋನ್‌ಗಳು ಮತ್ತೊಮ್ಮೆ ಭಾರತದ ಗಡಿ ಪ್ರವೇಶಿಸಿವೆ. ಡ್ರೋನ್ ಮೂಲಕ ಮಾದಕ ದ್ರವ್ಯ ಕಳ್ಳಸಾಗಣೆ ಮಾಡಲು ಯತ್ನಿಸಿದ ಶತ್ರುಗಳ ಯೋಜನೆಗಳನ್ನು ವಿಫಲಗೊಳಿಸುವಲ್ಲಿ ಬಿಎಸ್‌ಎಫ್ ಮತ್ತು ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ. ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು 17.50 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ.
ಡ್ರೋನ್ ಹಾರಾಟದ ಬಗ್ಗೆ ಮಾಹಿತಿ ಪಡೆದ ಬಿಎಸ್ಎಫ್ ಸಿಬ್ಬಂದಿ : ಅಮೃತಸರದ ಗಡಿ ಗ್ರಾಮವಾದ ರಾನಿಯಾದಲ್ಲಿ ಡ್ರೋನ್ ಹಾರಾಟದ ಕುರಿತು ಬಿಎಸ್ಎಫ್ ಗೆ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಪಂಜಾಬ್ ಪೊಲೀಸರ ನೆರವಿನೊಂದಿಗೆ ಆ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಸಿಬ್ಬಂದಿ ಪ್ಲಾಸ್ಟಿಕ್ ಪ್ಯಾಕೆಟ್‌ನಿಂದ 5 ಸಣ್ಣ ಬಾಟಲಿಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ 2.630 ಕೆ.ಜಿ ಹೆರಾಯಿನ್ ಪತ್ತೆಯಾಗಿದೆ.
ಬಿಎಸ್ಎಫ್ ಟ್ವೀಟ್ :ಈ ಕುರಿತು ಬಿಎಸ್‌ಎಫ್ ಸಾಮಾಜಿಕ ಮಾಧ್ಯಮ ಎಕ್ಸ್ ಆ್ಯಪ್ನಲ್ಲಿ ಮಾಹಿತಿ ಹಂಚಿಕೊಂಡಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬಿಎಸ್‌ಎಫ್ ಸಿಬ್ಬಂದಿ ಅಮೃತಸರದ ರಾನಿಯಾ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿದಾಗ ಪಾಕಿಸ್ತಾನದ ಡ್ರೋನ್‌ನಿಂದ ಹೆರಾಯಿನ್ ತುಂಬಿದ 5 ಪ್ಲಾಸ್ಟಿಕ್ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುವನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದೆ. ಇನ್ನು ವಶವಪಡಿಸಿಕೊಂಡ ಸ್ವತ್ತಿನ ಅಂತಾರಾಷ್ಟ್ರೀಯ ಮೌಲ್ಯ 17.5 ಕೋಟಿ ಎಂದು ಹೇಳಲಾಗುತ್ತಿದೆ.
ಮಣ್ಣಿನಲ್ಲಿ ಹುದುಗಿಸಿಟ್ಟಿದ್ದ ಮಾದಕ ವಸ್ತು ಪತ್ತೆ : ಹಾಗೆಯೇ, ಗುರುದಾಸ್‌ಪುರ ಗಡಿಯಲ್ಲಿರುವ ಕಮಲಾಪುರ ಗ್ರಾಮದಲ್ಲಿ ಬಿಎಸ್‌ಎಫ್ ಯೋಧರು ಶೋಧ ನಡೆಸಿದಾಗ ಮುಳ್ಳುತಂತಿಯ ಆಚೆಗೆ ನೆಲದಲ್ಲಿ ಹುದುಗಿಸಿಟ್ಟಿದ್ದ ಸರಕನ್ನು ವಶಪಡಿಸಿಕೊಂಡರು. ನೆಲದಲ್ಲಿ ಹೂತಿದ್ದ ಬ್ಯಾಟರಿಯಲ್ಲಿ 6 ಪ್ಯಾಕೆಟ್ ಹೆರಾಯಿನ್ ಹಾಗೂ 70 ಗ್ರಾಂನ ಚಿಕ್ಕ ಅಫೀಮು ಪ್ಯಾಕೆಟ್ ಪತ್ತೆಯಾಗಿದೆ.