ಜೈಪುರ(ರಾಜಸ್ಥಾನ):ರಾಜಸ್ಥಾನದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ನಡೆಸಿದ ಹಿರಿಯ ಮತದಾರರ ಭೌತಿಕ ಪರಿಶೀಲನೆ ವೇಳೆ ವಿಶೇಷ ಅಂಕಿ ಅಂಶಗಳು ಬೆಳಕಿಗೆ ಬಂದಿವೆ. ರಾಜಸ್ಥಾನದ 33 ಜಿಲ್ಲೆಗಳಲ್ಲಿ 14,976 ಮಂದಿ ಶತಾಯುಷಿ (100 ಹಾಗೂ ಹೆಚ್ಚಿನ ವಯಸ್ಸಿನ) ಮತದಾರರಿದ್ದಾರೆ. ಜುಂಜುನು ಜಿಲ್ಲೆಯಲ್ಲಿ ಈ ವಯೋಮಾನದ ಗರಿಷ್ಠ 1,688 ಮತದಾರರು ಇದ್ದಾರೆ. ಇವರಲ್ಲಿ ಅತಿ ಕಡಿಮೆ 73 ಮಂದಿ ಹಿರಿಯ ಮತದಾರರು ಬರಾನ್ ಜಿಲ್ಲೆಯಲ್ಲಿದ್ದಾರೆ ಎಂಬುದು ಗಮನ ಸೆಳೆದಿದೆ.
ಅಕ್ಟೋಬರ್ 1ರಂದು ಅಂತಾರಾಷ್ಟ್ರೀಯ ಹಿರಿಯರ ದಿನದ ಸಂದರ್ಭದಲ್ಲಿ, ರಾಜ್ಯದ ಹಿರಿಯ ಮತದಾರರನ್ನು ಗೌರವಿಸಲಾಗುತ್ತಿದೆ. ಅಲ್ಲದೇ, ಜುಂಜುನು ಜಿಲ್ಲೆಯ ಬಳಿಕ ಜೈಪುರದಲ್ಲಿ 1,126, ಉದಯಪುರದಲ್ಲಿ 968, ಭಿಲ್ವಾರಾದಲ್ಲಿ 844, ಸಿಕರ್‌ನಲ್ಲಿ 828 ಮತ್ತು ಪಾಲಿಯಲ್ಲಿ 820 ಮಂದಿ ಮತದಾರರಿಗೆ 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪ್ರವೀಣ್ ಗುಪ್ತಾ ಮಾಹಿತಿ ನೀಡಿದ್ದಾರೆ.