ಡುಂಗರಪುರ(ರಾಜಸ್ಥಾನ): ಶಿವರಾತ್ರಿ ಪ್ರಸಾದ ಸೇವಿಸಿದ ನಂತರ 120 ಕ್ಕೂ ಹೆಚ್ಚು ಜನರು ಅಸ್ವಸ್ಥಗೊಳಗಾದ ಘಟನೆ ಖಲೀಲ್ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ಶಿವರಾತ್ರಿ ಪ್ರಸಾದ ಸೇವಿಸಿ 120ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ ಪ್ರಸಾದ ಸೇವಿಸಿದ ನಂತರ ಭಕ್ತಾದಿಗಳಿಗೆ ಹೊಟ್ಟೆನೋವು, ವಾಂತಿ ಮತ್ತು ಭೇದಿ ಶುರುವಾಗಿದೆ. ಗ್ರಾಮಸ್ಥರು ಕೂಡಲೇ ಈ ಮಾಹಿತಿ ಜಿಲ್ಲಾ ಕೇಂದ್ರಕ್ಕೆ ರವಾನಿಸಿದ್ದರು. ಮಾಹಿತಿ ಪಡೆದ ಜಿಲ್ಲಾ ಕೇಂದ್ರ, ಪೂನ್‌ಪುರ ಮತ್ತು ಬಂಕೋಡ ಆರೋಗ್ಯ ಕೇಂದ್ರಗಳ ವೈದ್ಯಕೀಯ ತಂಡಗಳು ಖಲೀಲ್ ಗ್ರಾಮಕ್ಕೆ ತೆರಳಿ ಜನರಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದರು.
ಕೆಲ ಭಕ್ತಾದಿಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದ ಹಿನ್ನೆಲೆ ಅವರನ್ನು ಆ್ಯಂಬುಲೆನ್ಸ್ ಮೂಲಕ ಡುಂಗರಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವರಾತ್ರಿಯ ಪ್ರಯುಕ್ತ ಸಾಗೋ ಖಿಚ್ಡಿ ಮತ್ತು ಮಜ್ಜಿಗೆಯ ಪ್ರಸಾದವನ್ನು ವಿತರಿಸಲಾಗಿತ್ತು ಎಂದು ಆಸ್ಪುರ ಬ್ಲಾಕ್ ಸಿಎಮ್ಹೆಚ್ಒ ಡಾ.ಯೋಗೇಶ್ ಉಪಾಧ್ಯಾಯ ಹೇಳಿದರು.
ಈ ಸಮಯದಲ್ಲಿ ದೇವಾಲಯಕ್ಕೆ ಬಂದಿದ್ದ ಹೆಚ್ಚಿನ ಸಂಖ್ಯೆಯ ಭಕ್ತರು ಪ್ರಸಾದವನ್ನು ಸೇವಿಸಿದರು. ಪ್ರಸಾದವನ್ನು ಸೇವಿಸಿದ ನಂತರ ಜನರ ಆರೋಗ್ಯದಲ್ಲಿ ಏರುಪೇರು ಉಂಟಾಯಿತು ಎಂದು ಯೋಗೇಶ್ ಹೇಳಿದ್ದಾರೆ.
ವೈದ್ಯಕೀಯ ತಂಡವು ಸ್ಥಳದಲ್ಲೇ ಜನರಿಗೆ ಚಿಕಿತ್ಸೆ ನೀಡಿತು. ಸುಮಾರು 25 ಜನರ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದರಿಂದ ಆ್ಯಂಬುಲೆನ್ಸ್ ಮೂಲಕ ಡುಂಗರ್‌ಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಿಚ್ಡಿ ಮತ್ತು ಮಜ್ಜಿಗೆಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ವರದಿ ಬಂದ ನಂತರವೇ ನಿಖರವಾದ ಮಾಹಿತಿ ತಿಳಿದು ಬರಲಿದೆ ಎಂದು ಎಂದು ಡಾ.ಯೋಗೇಶ್ ತಿಳಿಸಿದ್ದಾರೆ.