ಶ್ರೀನಗರ(ಜಮ್ಮು ಕಾಶ್ಮೀರ): ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಬೇಟೆ ಮುಂದುವರೆದಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಕಣಿವೆನಾಡಲ್ಲಿ ದುಷ್ಟಶಕ್ತಿಗಳ ಹುಟ್ಟಡಗಿಸಲು ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿವೆ.
ಈ ವರ್ಷ ಸುಮಾರು 102 ಮಂದಿ ಉಗ್ರರನ್ನು ಎನ್ಕೌಂಟರ್ಗಳಲ್ಲಿ ಕೊಲ್ಲಲಾಗಿದೆ. ಉತ್ತರ ಕಾಶ್ಮೀರದ ಸೊಪೋರ್ ನಗರದಲ್ಲಿ ನಡೆದ ಗುಂಡಿನ ದಾಳಿ ವೇಳೆ ಮೂವರು ಉಗ್ರರನ್ನು ಕೊಂದ ನಂತರ ಪೊಲೀಸರು ಈ ಮಾಹಿತಿ ಒದಗಿಸಿದ್ದಾರೆ.
ಇದೇ ವೇಳೆ ಹಿಂದಿನ ವರ್ಷ 225 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿತ್ತು ಎಂದು ಜಮ್ಮು ಕಾಶ್ಮೀರದ ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಭಯೋತ್ಪಾದಕರ ನಿರ್ಮೂಲನೆಗೆ ಭದ್ರತಾ ಪಡೆಗಳು ಶ್ರಮಿಸುತ್ತಿವೆ.
ಸೊಪೋರ್ ಎನ್ಕೌಂಟರ್ ಬಗ್ಗೆ ಮಾಹಿತಿ ನೀಡಿದ ಅವರು, ಆಗಸ್ಟ್ 23 ಮತ್ತು 24ರ ಮಧ್ಯರಾತ್ರಿ ವಿಶ್ವಾಸಾರ್ಹ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಮೊದಲು ಉಗ್ರರಿಗೆ ಶರಣಾಗಲು ಸೂಚನೆ ನೀಡಲಾಯಿತು. ಆದರೆ ಶರಣಾಗಲು ನಿರಾಕರಿಸಿದ ಕಾರಣದಿಂದ ಅವರ ಮೇಲೆ ಗುಂಡು ಹಾರಿಸಲಾಯಿತು ಎಂದರು.
ಹತ್ಯೆಯಾದ ಉಗ್ರರನ್ನು ಶೋಪಿಯಾನ್ನ ಫೈಸಲ್ ಫಯಾಜ್ ಮತ್ತು ರಮೀಜ್ ಅಹ್ಮದ್ ಮತ್ತು ಕುಪ್ವಾರಾದ ಗುಲಾಂ ಮುಸ್ತಫಾ ಶೇಖ್ ಎಂದು ಗುರುತಿಸಲಾಗಿದೆ. ಈ ಮೂವರೂ ಉಗ್ರಗಾಮಿ ಸಂಘಟನೆಯಾದ ಟಿಆರ್‌ಎಫ್‌ನೊಂದಿಗೆ ಸಂಬಂಧ ಹೊಂದಿದ್ದರು.
ಕಾರ್ಯಾಚರಣೆ ವೇಳೆ ಒಂದು ಎಕೆ -47 ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ದಾಖಲೆಗಳು ತಿಳಿಸಿವೆ.
ಇದನ್ನೂ ಓದಿ:ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಪಾಳಕ್ಕೆ ಹೊಡೆಯುವ ಹೇಳಿಕೆ: ಕೇಂದ್ರ ಸಚಿವರಿಗೆ ಜಾಮೀನು ಮಂಜೂರು